

ಬೆಂಗಳೂರು: ಈಗಾಗಲೇ ರಾಜ್ಯದೆಲ್ಲೆಡೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಇಲ್ಲಿಯವರೆಗೆ ಇದ್ದ ನಿಯಮಗಳನ್ನೆಲ್ಲಾ ಗಾಳಿಗೆ ತೂರಿದರೆ ಭಾರಿ ದಂಡ ತೆರಬೇಕಾಗತ್ತೆ ಹುಷಾರ್!
ಹೌದು. ಇಂಥದ್ದೊಂದು ಎಚ್ಚರಿಕೆ ಈಗ ಸರ್ಕಾರ ನೀಡಿದೆ. ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಮಾಸ್ಕ್ಗಳನ್ನು ಈಗಾಗಲೇ ಕಡ್ಡಾಯ ಮಾಡಲಾಗಿದ್ದು, ಅದನ್ನು ಧರಿಸದೇ ರಸ್ತೆಗಿಳಿದವರಿಂದ ದಂಡ ವಸೂಲಿ ಮಾಡುವ ಪ್ರಕ್ರಿಯೆ ಶುರು ಮಾಡಲಾಗಿದೆ. ಅದರ ಮುಂದುವರೆದಿರುವ ಭಾಗವಾಗಿ ಇನ್ನೊಂದಿಷ್ಟು ನಿಯಮಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಬಾಯಿ ಮತ್ತು ಮೂಗು ಮುಚ್ಚುವಂಥ ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್ ಬಟ್ಟೆಯದ್ದೂ ಆಗಿರಬಹುದು, ಹ್ಯಾಂಡ್ ಕರ್ಚಿಫ್ ಕೂಡ ಬಳಸಬಹುದಾಗಿದೆ. ಹೊರಗಡೆ ಹೋಗುವ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಎಂದರೆ ಇಬ್ಬರು ವ್ಯಕ್ತಿಗಳ ನಡುವೆ ಕನಿಷ್ಠ ಒಂದು ಮೀಟರ್ ಅಂತರವಿರಬೇಕು.
ಈ ನಿಯಮ ಪಾಲನೆ ಮಾಡದೇ ಹೋದರೆ ನಗರ ಪಾಲಿಕೆ ಪ್ರದೇಶಗಳಲ್ಲಿ 200 ರೂಪಾಯಿ ಹಾಗೂ ನಗರ ಪಾಲಿಕೆ ಹೊರತಾದ ಪ್ರದೇಶಗಳಲ್ಲಿ 100 ರೂಪಾಯಿ ದಂಡ ವಿಧಿಸಲಾಗುವುದು. ಈ ದಂಡವನ್ನು ವಸೂಲು ಮಾಡುವ ಅಧಿಕಾರದ ಬಗ್ಗೆಯೂ ಸರ್ಕಾರ ಸ್ಪಷ್ಟಪಡಿಸಿದೆ. ಸಬ್ ಇನ್ಸ್ಪೆಕ್ಟರ್ ದರ್ಜೆಗಿಂತ ಮೇಲಿನ ದರ್ಜೆಯ ಅಧಿಕಾರಿಗಳು, ನಗರ ಪಾಲಿಕೆಯ ಆರೋಗ್ಯ ಇನ್ಸ್ಪೆಕ್ಟರ್, ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅಥವಾ ಸರ್ಕಾರದಿಂದ ನಿಯೋಜನೆಗೊಂಡಿರುವ ಅಧಿಕಾರಿಗಳು ಸ್ಥಳದಲ್ಲಿಯೇ ದಂಡವನ್ನು ವಸೂಲು ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ.
ಅಂದಹಾಗೆ ಈ ಹೊಸ ನಿಯಮಗಳು ಇನ್ನೂ ಒಂದು ವರ್ಷದವರೆಗೆ ಚಾಲ್ತಿಯಲ್ಲಿ ಇರುತ್ತದೆ. ಕರೊನಾ ಸೋಂಕು ಸಂಪೂರ್ಣ ನಿರ್ಮೂಲನೆ ಆದ ನಂತರ ಯಾವುದೇ ಸಮಸ್ಯೆ ಇಲ್ಲ ಎಂದು ಸರ್ಕಾರಕ್ಕೆ ಅನ್ನಿಸಿದರೆ ಈ ನಿಯಮವನ್ನು ಒಂದು ವರ್ಷಕ್ಕಿಂತ ಮುನ್ನವೇ ಸ್ಥಗಿತಗೊಳಿಸುತ್ತದೆ. ಇಲ್ಲದೇ ಹೋದರೆ ಸರ್ಕಾರ ಮುಂದಿನ ಆದೇಶ ಹೊರಡಿಸುವವರೆಗೂ ನಿಯಮವನ್ನು ಕಟ್ಟುನಿಟ್ಟಾಗಿ, ಕಡ್ಡಾಯವಾಗಿ ಜನರು ಪಾಲಿಸಬೇಕಾಗುತ್ತದೆ.