

ನವದೆಹಲಿ: ಕೆಲ ವಾರಗಳಿಂದ ಎಲ್ಲೆಡೆ ಪ್ಲಾಸ್ಮಾ ಥೆರಪಿ ಸುದ್ದಿ ಮಾಡಿತ್ತು. ಕರೊನಾ ಸೋಂಕಿತರನ್ನು ಗುಣಪಡಿಸಲು ಇದು ಅವರ ಪಾಲಿನ ಸಂಜೀವಿನಿ ಎಂದೇ ಹಲವಾರು ವೈದ್ಯರು ಅಭಿಪ್ರಾಯ ಪಟ್ಟಿದ್ದರು.
ಕರೊನಾ ಸೋಂಕಿನಿಂದ ಗುಣ ಮುಖರಾದವರ ದೇಹದಲ್ಲಿ ಕರೊನಾ ವೈರಸ್ ವಿರುದ್ಧ ಹೋರಾಡುವ ಜೀವ ನಿರೋಧಕಗಳು ಅಭಿವೃದ್ಧಿಯಾಗಿರುತ್ತವೆ. ಇವನ್ನು ಸೋಂಕಿತ ವ್ಯಕ್ತಿಯ ದೇಹಕ್ಕೆ ವರ್ಗಾಯಿಸುವ ಮೂಲಕ ಸೋಂಕಿತನನ್ನು ಗುಣಪಡಿಸುವ ಪ್ಲಾಸ್ಮಾ ಥೆರಪಿ ಕುರಿತಂತೆ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆಯುತ್ತಲೇ ಇವೆ. ಮಾತ್ರವಲ್ಲದೇ ಕೆಲವೆಡೆ ಈ ಥೆರಪಿಯನ್ನು ರೋಗಿಗಳ ಮೇಲೆಯೂ ಪ್ರಯೋಗ ಮಾಡಲಾಗುತ್ತಿದೆ.
ಕರೊನಾ ಸೋಂಕಿತರ ಜೀವ ಉಳಿಸಲು ದೇಶದ ಹಲವಾರು ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಯ ಮೇಲೆ ಭರವಸೆ ಇಟ್ಟಿರುವಾಗಲೇ ಆತಂಕಕಾರಿ ವರದಿಯೊಂದು ದೆಹಲಿಯ ಆಸ್ಪತ್ರೆಯಿಂದ ಹೊರಬಂದಿದೆ. ದೇಶದಲ್ಲಿಯೇ ಪ್ರಥಮ ಪ್ಲಾಸ್ಮಾ ಪ್ರಯೋಗ ಮಾಡಿಸಿಕೊಂಡು ಗುಣಮುಖರಾದಂತೆ ಕಂಡುಬಂದಿದ್ದ ದೆಹಲಿಯ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ವ್ಯಕ್ತಿ ಇಂದು ಮೃತಪಟ್ಟಿದ್ದಾರೆ! ಈ ಮೂಲಕ ಪ್ಲಾಸ್ಮಾ ಥೆರಪಿ ಮೇಲೆ ನಂಬಿಕೆ ಇಟ್ಟುಕೊಂಡಿದ್ದ ವೈದ್ಯಕೀಯ ಕ್ಷೇತ್ರಕ್ಕೆ ಭಾರಿ ಆಘಾತವಾಗಿದೆ.
ಕರೊನಾ ವಾಸಿಪಡಿಸಲು ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿಯಾದುದು ಎಂಬುದಕ್ಕೆ ಯಾವುದೇ ನಿರ್ದಿಷ್ಟ ಪುರಾವೆ ಸಿಕ್ಕಿಲ್ಲ ಎಂದು ಸಚಿವಾಲಯದ ಹಿರಿಯ ಅಧಿಕಾರಿ ಲವ ಅಗರ್ವಾಲ್ ಈಚೆಗೆ ತಿಳಿಸಿದ್ದರು.‘ಪ್ಲಾಸ್ಮಾ ಚಿಕಿತ್ಸೆಯನ್ನು ಎಚ್ಚರದಿಂದ ಮಾಡದಿದ್ದರೆ ರೋಗಿ ಮೃತಪಡುವ ಸಾಧ್ಯತೆಯೂ ಇದೆ’ ಎಂದು ಅವರು ಎಚ್ಚರಿಸಿದ್ದರು. ಇದೀಗ ಈ ಎಚ್ಚರಿಕೆ ನಿಜವಾಗಿದೆ!
ಏ.20ರಂದು ಲೀಲಾವತಿ ಆಸ್ಪತ್ರೆಗೆ ದಾಖಲಾದ 53 ವರ್ಷದ ವ್ಯಕ್ತಿಗೆ ಏ.25ರಿಂದ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿತ್ತು. ಆರಂಭದಲ್ಲಿ ಆರೋಗ್ಯ ಸುಧಾರಿಸಿದಂತೆ ಕಾಣಿಸಿದರೂ ನಂತರ ತೀವ್ರ ಉಸಿರಾಟದ ತೊಂದರೆಯಿಂದಾಗಿ ರೋಗಿ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಮೃತ ರೋಗಿಗೆ ಕರೊನಾದಿಂದ ಗುಣಮುಖರಾದ ವ್ಯಕ್ತಿಯ 200 ಎಂಎಲ್ ಪ್ಲಾಸ್ಮಾವನ್ನು ಏ.25 ರಂದು ನೀಡಲಾಗಿತ್ತು.
ಪ್ಲಾಸ್ಮಾ ಚಿಕಿತ್ಸೆಯ ಪರಿಣಾಮವನ್ನು ತಿಳಿಯಲು ದೇಶದಾದ್ಯಂತ ಕ್ಲಿನಿಕಲ್ ಪರೀಕ್ಷೆ ನಡೆಸುವಂತೆ ಐಸಿಎಂಆರ್ (ಇನ್ಸ್ಟಿಟ್ಯೂಟ್ ಆಫ್ ಸೇಫ್ಟಿ ಮ್ಯಾನೇಜ್ಮೆಂಟ್ ಆ್ಯಂಡ್ ರೀಸರ್ಚ್) ಸಲಹೆ ಮಾಡಿತ್ತು. ಪ್ಲಾಸ್ಮಾ ಚಿಕಿತ್ಸೆಯ ಪರೀಕ್ಷೆ ನಡೆಸುವುದಿದ್ದರೂ ವೆಂಟಿಲೇಟರ್ ಸಹಾಯದಿಂದ ಇರುವ ತೀರಾ ಗಂಭೀರ ಸ್ಥಿತಿಯಲ್ಲಿರುವ ಕರೊನಾ ರೋಗಿಗಳ ಮೇಲಷ್ಟೆ ನಡೆಸಬಹುದಾಗಿದೆ ಎಂದೂ ಐಸಿಎಂಆರ್ ಹೇಳಿತ್ತು (ಏಜೆನ್ಸಿಸ್)