ಮಧುಮೇಹಿಗಳಿಗೆ ಕರೊನಾ ಸಂಚಕಾರಿ

Coronavirsu
Published on

ಪಂಕಜ ಕೆ.ಎಂ ಬೆಂಗಳೂರು: ಕರೊನಾ ಮಾರಿಯು ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ಹೆಚ್ಚು ಅಪಾಯ ತರುತ್ತಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರಲ್ಲಿ ಶೇ.75 ಮಂದಿ ಮಧುಮೇಹಿಗಳೆಂಬುದನ್ನು ನಗರದ ಕೋವಿಡ್ ಆಸ್ಪತ್ರೆಯೊಂದರ ಸಮೀಕ್ಷೆ ಬಹಿರಂಗಪಡಿಸಿದೆ. ಮಧುಮೇಹ ನಿಯಂತ್ರಣ ಇಲ್ಲದವರಲ್ಲಿ ಕೋವಿಡ್ ತೀವ್ರತೆ ಹೆಚ್ಚಾಗಿ ಸಾವು ನೋವು ಸಂಭವಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಆರೋಗ್ಯ ಇಲಾಖೆ ರೂಪಿಸಿರುವ ಕೋವಿಡ್-19 ನಿಯಂತ್ರಣ ನಿಯಮಗಳನ್ನು ಸರಿಯಾಗಿ ಪಾಲಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.

ನಿಯಮಗಳನ್ನು ಪಾಲಿಸಿ ಅನಗತ್ಯವಾಗಿ ಮನೆಯಿಂದ ಹೊರಹೋಗದಿರಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಿ ಸಭೆ, ಸಮಾರಂಭ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಿ ತಾಜಾ ಹಾಗೂ ಬಿಸಿ ಆಹಾರ, ಬಿಸಿ ನೀರು ಸೇವಿಸಿ ನಿಯತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ  ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ

ಜೀವನಶೈಲಿ ಕೊಡುಗೆ

ಬದಲಾದ ಜೀವನಶೈಲಿ, ಆಹಾರ ಪದ್ಧತಿ, ಒತ್ತಡದ ಜೀವನದಂತಹ ಕಾರಣಗಳಿಂದಾಗಿ ಹಿರಿಕಿರಿಯರೆನ್ನದೆ ಮಧುಮೇಹಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇವರಲ್ಲಿ ರೋಗ ನಿರೋಧಕ ಶಕ್ತಿ ಇರುವುದಿಲ್ಲ. ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳದ ಕಾರಣ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇಲ್ಲದೆ ಚೇತರಿಕೆ ಪ್ರಮಾಣ ಕಡಿಮೆ ಇರುತ್ತದೆ. ಹೀಗಾಗಿ ಕೋವಿಡ್ ಸೋಂಕಿತರಲ್ಲಿ ಗಂಭೀರ ಹಂತ ತಲುಪುವ ಹಾಗೂ ಸಾವನ್ನಪ್ಪುವವರಲ್ಲಿ ಮಧುಮೇಹಿಗಳು ಹೆಚ್ಚಿಗೆಯಿದ್ದಾರೆ ಎನ್ನುತ್ತಾರೆ ತಜ್ಞರು.

ಬಿಪಿ ಅಪಾಯಕಾರಿ

ಮಧುಮೇಹಿಗಳ ನಂತರದ ಸ್ಥಾನದಲ್ಲಿ ಅಧಿಕ ರಕ್ತದೊತ್ತಡ ಹಾಗೂ ಬೊಜ್ಜು ಸಮಸ್ಯೆ ಹೊಂದಿದವರಿದ್ದಾರೆ. ಈ ಮೂರರಲ್ಲಿ ಯಾವುದಿದ್ದರೂ ಹಲವು ಸಮಸ್ಯೆಗಳಿಗೆ ದಾರಿಯಾಗುತ್ತದೆ. ಅನಿಯಂತ್ರಿತ ಮಧುಮೇಹ ಹಾಗೂ ರಕ್ತದೊತ್ತಡ ಇರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇದಲ್ಲದೆ ಹೃದ್ರೋಗ, ಕಿಡ್ನಿ, ಲಿವರ್ ಹಾಗೂ ಶ್ವಾಸಕೋಶದ ತೊಂದರೆ, ಕ್ಯಾನ್ಸರ್ ಇತ್ಯಾದಿ ದೀರ್ಘಕಾಲೀನ ಆರೋಗ್ಯ ಸಮಸ್ಯೆ ಹೊಂದಿದವರಿಗೆ ಸೋಂಕು ತಗುಲಿದರೆ ಅಪಾಯದ ಪ್ರಮಾಣ ಹೆಚ್ಚಾಗುತ್ತದೆ.

ಹೃದ್ರೋಗಿಗಳ ಅಧ್ಯಯನ

ಹೃದ್ರೋಗಕ್ಕೆ ಹಲವು ಕಾರಣಗಳಿರುತ್ತದೆ. ಇದು ಯಾರಿಗೆ ಯಾವ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೋವಿಡ್-19 ರಿಂದಾಗಿ ಆಸ್ಪತ್ರೆಗಳಲ್ಲಿ ಕರೊನಾ ಪರೀಕ್ಷೆ ಕಡ್ಡಾಯವಾಗಿದೆ. ಜಯದೇವ ಹೃದ್ರೋಗ ಸಂಸ್ಥೆಯ ತುರ್ತು ನಿಗಾ ಘಟಕದಲ್ಲಿ ದಾಖಲಾಗುವ 100 ಹೃದ್ರೋಗಿಗಳಲ್ಲಿ 20-25 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇವರಲ್ಲಿ ಶೇ. 5-10 ಮಂದಿಗೆ ಕರೊನಾದಿಂದಾಗಿಯೇ ಸಮಸ್ಯೆ ಎದುರಾಗಿದೆ. ಈ ಕುರಿತು ಅಧ್ಯಯನ ನಡೆಸಲು ಚಿಂತನೆ ನಡೆದಿದೆ ಎಂದು ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.

ಹೋಂ ಐಸೋಲೇಷನ್ ಅಪಾಯ

ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಿಂದಾಗಿ ರೋಗಲಕ್ಷಣ ಇಲ್ಲದವರಿಗೆ ಹೋಂ ಐಸೋಲೇಷನ್​ಗೆ ಸೂಚಿಸಲಾಗುತ್ತಿದೆ. ಆದರೆ ಮಧುಮೇಹ, ರಕ್ತದೊತ್ತಡ, ಹೃದ್ರೋಗ ಸೇರಿದಂತೆ ದೀರ್ಘಕಾಲೀನ ಆರೋಗ್ಯ ಸಮಸ್ಯೆ ಹೊಂದಿದವರಿಗೆ ಹೋಂ ಐಸೋಲೇಷನ್ ಅಪಾಯ ತರಬಹುದು. ಹೀಗಾಗಿ ರೋಗಲಕ್ಷಣ ಇಲ್ಲದ ಸೋಂಕಿತರು ಈ ರೀತಿಯ ಆರೋಗ್ಯ ಸಮಸ್ಯೆ ಹೊಂದಿದ್ದರೆ ನಿರ್ಲಕ್ಷಿಸದೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಸೂಕ್ತ ಎನ್ನುತ್ತಾರೆ ತಜ್ಞರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net