

ಬೆಂಗಳೂರು: ಮಾಸ್ಕ್ ಹಾಕಿಕೊಳ್ಳದಿದ್ದರೆ ದುಬಾರಿ ದಂಡ ವಿಧಿಸುವ ಪ್ರಕ್ರಿಯೆಯನ್ನೇನೋ ರಾಜ್ಯ ಸರ್ಕಾರ ಅತ್ಯುತ್ಸಾಹದಿಂದ ಆರಂಭಿಸಿದೆ ನಿಜ. ಆದರೆ ಬಹಳಷ್ಟು ಜನರು ಮಾಸ್ಕ್ ಎಲ್ಲಿಂದ ತರುತ್ತಾರೆ, ಹೇಗೆ ಧರಿಸುತ್ತಾರೆ ಎಂಬುದರ ಅಂದಾಜು ಹೆಚ್ಚಿನ ಮಂದಿಗೆ ಇದ್ದಂತಿಲ್ಲ. ಆ ರೀತಿಯ ಮಾಸ್ಕ್‌ನಿಂದಲೇ ಸೋಂಕು ಹೆಚ್ಚಾಗುವ ಸಾಧ್ಯತೆ ಅಧಿಕವಾಗಿದೆ.
ಗ್ಯಾರೇಜ್, ಬೀದಿ ಬದಿ ವ್ಯಾಪಾರ, ಕೂಲಿ ಕೆಲಸ, ಕಟ್ಟಡ ಕಾರ್ಮಿಕರು, ಪೇಂಟಿಂಗ್ ಮಾಡುವವರು, ಸಣ್ಣ ಹೋಟೆಲ್‌ಗಳಲ್ಲಿ ಕೆಲಸ ಮಾಡುವವರು ಗಲೀಜಾದ ಮಾಸ್ಕ್‌ಗಳನ್ನು ಧರಿಸಿ ಓಡಾಡುತ್ತಿದ್ದಾರೆ. ಇನ್ನು ಕೆಲವರು ಮಾಸ್ಕ್ ಕೊಳ್ಳಲು ಹಣವಿಲ್ಲದೆ ರಸ್ತೆ ಬದಿಯಲ್ಲಿ ಮತ್ತು ಕಸದಲ್ಲಿ ಯಾರೋ ಎಸೆದು ಹೋದ ಮಾಸ್ಕ್‌ಗಳನ್ನೇ ಆಯ್ದುಕೊಂಡು ಸ್ವಚ್ಛಗೊಳಿಸದೆ ಮರುಬಳಕೆ ಮಾಡುತ್ತಿದ್ದಾರೆ! ದುಬಾರಿ ದಂಡದ ಭೀತಿಗೊಳಗಾಗಿ ಬಡವರು, ನಿರ್ಗತಿಕರು ಈ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಸ್ವಚ್ಛಗೊಳಿಸದ ಮತ್ತು ಬೇರೊಬ್ಬರು ಬಳಸಿದ ಮಾಸ್ಕ್‌ಗಳನ್ನು ಮರುಬಳಕೆ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆಗಳಿವೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ತೀವ್ರ ಉಸಿರಾಟದ ತೊಂದರೆ…!
ಇದಲ್ಲದೆ, ಮಾಸ್ಕ್ ಧರಿಸದವರಿಗೆ ದುಬಾರಿ ದಂಡ ವಿಧಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ನಗರ ಪ್ರದೇಶಗಳಲ್ಲಿ 1 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಇದು ನಮ್ಮ ಮನೆಯ 10-15 ದಿನಗಳ ವೆಚ್ಚವಾಗಿರುತ್ತದೆ. ದಂಡವಾಗಿ ಇಷ್ಟು ಹಣ ಪಾವತಿಸಲು ಸಾಧ್ಯವಿಲ್ಲ. ನಮ್ಮ ಬಳಿ ಅಷ್ಟೊಂದು ಹಣವಿಲ್ಲ ಎಂದು ದಂಡ ವಿಧಿಸುವವರ ವಿರುದ್ಧ ಕೆಲವರು ಆಕ್ರೋಶ ವ್ಯಕ್ತ್ತಪಡಿಸಿದ್ದಾರೆ. ಮತ್ತೆ ಕೆಲವರು ಪೊಲೀಸ್ ಠಾಣೆಗೆ ಹೋಗೋಣ, ಕೋರ್ಟ್‌ನಲ್ಲಿಯೇ ದಂಡ ಪಾವತಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ನಮ್ಮ ತಪ್ಪಾಗಿದೆ ಇದೊಂದು ಬಾರಿ ಬಿಟ್ಟುಬಿಡಿ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಬಿಹಾರ ಚುನಾವಣೆ: ಯುಪಿಎ ಮೈತ್ರಿಕೂಟದ ಸೀಟುಹಂಚಿಕೆ ಫೈನಲ್, ಯಾರಿಗೆಷ್ಟು, ಸಿಎಂ ಅಭ್ಯರ್ಥಿ ಯಾರು?
ಬೆಂಗಳೂರಿನಲ್ಲಿ ಮಾಸ್ಕ್ ಧರಿಸದ 20 ಜನರನ್ನು ಹಿಡಿದು ದಂಡ ಕೇಳಲಾಯಿತು. ಅವರಲ್ಲಿ ಬಹುತೇಕರು, ‘‘ನನಗೆ ತಿಂಗಳಿಗೆ 6 ಸಾವಿರ ರೂ. ಸಂಬಳ, ನಾವಿರುವ ಚಿಕ್ಕ ಮನೆಗೆ 1 ಸಾವಿರ ರೂ. ಬಾಡಿಗೆ, ಇಷ್ಟೊಂದು ಹಣ ದಂಡ ಕಟ್ಟಿದರೆ ಜೀವನ ಮಾಡುವುದು ಕಷ್ಟವಾಗಲಿದೆ’’ ಎಂದು ಹೇಳಿದರು. ಆಗ, ಜತೆಗಿದ್ದ ಪೊಲೀಸರು ಅವರನ್ನು ಬಿಟ್ಟು ಕಳಿಸಿದರು. ಇಡೀ ದಿನ ಇಬ್ಬರಿಗೆ ಮಾತ್ರ ದಂಡ ಹಾಕಲು ಸಾಧ್ಯವಾಯಿತು ಎಂಬುದು ಮಾರ್ಷಲ್ ಒಬ್ಬರ ಅನುಭವ.