ದೇಶದಲ್ಲಿ ಸೋಂಕು ಏರಿಕೆ ಇನ್ನಷ್ಟು ಕಡಿಮೆ

corona
Published on

ನವದೆಹಲಿ: ತಿಂಗಳ ಹಿಂದೆ ಪ್ರತಿದಿನ 95 ಸಾವಿರಕ್ಕೂ ಅಧಿಕ ಕರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದ ಭಾರತದಲ್ಲಿ ಈಗ ಸೋಂಕಿನ ಸಂಖ್ಯೆ ಗಣನೀಯ ಇಳಿಕೆ ಕಂಡಿದೆ. ಸೋಮವಾರ 46,800 ಪ್ರಕರಣಗಳು ಪತ್ತೆಯಾಗಿವೆ. ಇದು ಸೋಂಕಿನ ಏಕದಿನ ಏರಿಕೆಯಲ್ಲಿ ಮೂರು ತಿಂಗಳಲ್ಲಿ ವರದಿಯಾದ ಅತ್ಯಂತ ಕನಿಷ್ಠ ದಾಖಲೆಯಾಗಿದೆ. ಸತತ ಎರಡನೇ ದಿನವೂ ಮೃತರ ಸಂಖ್ಯೆ 600ಕ್ಕಿಂತ ಕಡಿಮೆ ವರದಿಯಾಗಿದೆ.

25 ಸಾವಿರಕ್ಕೂ ಹೆಚ್ಚು ಪ್ರಕರಣದ ಏಕದಿನ ಏರಿಕೆ ದಾಖಲೆ ಬರೆದಿದ್ದ ಮಹಾರಾಷ್ಟ್ರದಲ್ಲಿ 24 ಗಂಟೆಗಳಲ್ಲಿ 6 ಸಾವಿರ ಪ್ರಕರಣ ಪತ್ತೆಯಾಗಿದೆ. ಕರ್ನಾಟಕ ಮತ್ತು ಕೇರಳದಲ್ಲಿ ತಲಾ 5 ಸಾವಿರ, ಪಶ್ಚಿಮ ಬಂಗಾಳದಲ್ಲಿ ನಾಲ್ಕು ಸಾವಿರ, ತಮಿಳುನಾಡಿನಲ್ಲಿ 3,500 ಮತ್ತು ಆಂಧ್ರಪ್ರದೇಶದಲ್ಲಿ 3 ಸಾವಿರ ಪ್ರಕರಣ ಪತ್ತೆಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 75.97 ಲಕ್ಷಕ್ಕೆ ಏರಿಕೆಯಾಗಿದ್ದು, ಅದರಲ್ಲಿ 67.33 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. 7.48 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯಿವೆ. ಇದುವರೆಗೆ ಮೃತರಾದವರ ಸಂಖ್ಯೆ 1.15 ಲಕ್ಷಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ 18ಕ್ಕೆ ಶೇ. 92 ಕರೊನಾ ಹೆಚ್ಚಳ ವರದಿಯಾಗಿತ್ತು. ಅದೀಗ ಶೇ. 42ಕ್ಕೆ ಇಳಿದಿದೆ. ಪ್ರಸ್ತುತ ಚೇತರಿಕೆ ಪ್ರಮಾಣ ಶೇ. 88.63ರಷ್ಟಿದೆ. ಮರಣ ಪ್ರಮಾಣ ಶೇ. 1.52 ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

  • ಮದ್ಯದಲ್ಲಿ ಸ್ಯಾನಿಟೈಸರ್ ಸೇರಿಸಿ ಕುಡಿದ ಕಾರಣ ಕೇರಳದ ಪಯಾತುಕಾಡು ಪ್ರದೇಶದ ಬುಡಕಟ್ಟು ಜನಾಂಗದ ಐವರು ಸಾವನ್ನಪ್ಪಿದ್ದಾರೆ. ಮಹಿಳೆಯರು ಸೇರಿ ಅನೇಕರ ಸ್ಥಿತಿ ಚಿಂತಾಜನಕವಾಗಿದೆ.
  • ಚೆನ್ನೈನ ಪ್ರಸಿದ್ಧ ಕುಮಾರನ್ ಸಿಲ್ಕ್ ಅಂಗಡಿಯಲ್ಲಿ ಜನಜಂಗುಳಿ ತುಂಬಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಲಾಕ್​ಡೌನ್ ನಿಯಮ ಉಲ್ಲಂಘನೆ ಮಾಡಿರುವ ಆರೋಪದಡಿಯಲ್ಲಿ ಅಂಗಡಿಯನ್ನು ನಗರ ಪಾಲಿಕೆ ಅಧಿಕಾರಿಗಳು ಸೀಸ್ ಮಾಡಿದ್ದಾರೆ.
  • ಕರೊನಾ ಮಾಹಿತಿ ನೀಡುತ್ತಿರುವ ಆರೋಗ್ಯ ತಜ್ಞ ಆಂಥೋನಿ ಫೌಸಿ ಮಾತು ಕೇಳಿದ್ದರೆ ಅಮೆರಿಕದಲ್ಲಿ 70-80 ಲಕ್ಷ ಜನರು ಕರೊನಾಕ್ಕೆ ಬಲಿಯಾಗುತ್ತಿದ್ದರು. ದೇಶದ ಜನರು ಫೌಸಿ ಮತ್ತು ಕೆಲ ಮೂರ್ಖರ ಮಾತುಗಳಿಂದ ಬೇಸತ್ತಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹರಿಹಾಯ್ದಿದ್ದಾರೆ.
  • ದೇಶದಲ್ಲಿ 246 ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಪ್ರಕ್ರಿಯೆ ಆರಂಭವಾಗಿದ್ದು, ಆಕ್ಸಿಜನ್ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
  • ಇಸ್ರೇಲ್​ನ ಇಸ್ರೇಲ್ ಇನ್​ಸ್ಟಿಟ್ಯೂಟ್ ಆಫ್ ಬಯೋ ಲಾಜಿಕಲ್ ರಿಸರ್ಚ್ ‘ಬ್ರಿಲ್​ಲೈಫ್’ ಹೆಸರಿನ ಕರೊನಾ ಔಷಧ ತಯಾರಿಸಿದ್ದು, ಅಕ್ಟೋಬರ್ ಅಂತ್ಯದಲ್ಲಿ ಕ್ಲಿನಿಕಲ್ ಟ್ರಯಲ್ ಆರಂಭಿಸುವುದಾಗಿ ತಿಳಿಸಿದೆ.

ನವೆಂಬರ್​ಗೆ ಸ್ಪುಟ್ನಿಕ್-ವಿ ವರದಿ

ಸ್ಪುಟ್ನಿಕ್-ವಿ ಔಷಧದ ಮೂರನೇ ಹಂತದ ಪ್ರಯೋಗ ವರದಿಯನ್ನು ನವೆಂಬರ್​ನಲ್ಲಿ ನೀಡುವುದಾಗಿ ರಷ್ಯಾ ತಿಳಿಸಿದೆ. ದೇಶದಲ್ಲಿ 40 ಸಾವಿರ ಜನರ ಮೇಲೆ ಮೂರನೇ ಹಂತದ ಪ್ರಯೋಗ ಮಾಡಲಾಗುತ್ತಿದ್ದು, ನವೆಂಬರ್​ಗೆ 10 ಸಾವಿರ ಜನರ ವರದಿ ನೀಡುವುದಾಗಿ ಹೇಳಿದೆ.. ಭಾರತದಲ್ಲಿ ಡಾ.ರೆಡ್ಡಿ ಲ್ಯಾಬೋರೇಟರಿ ಸ್ಪುಟ್ನಿಕ್-ವಿ ಔಷಧ ಪ್ರಯೋಗ ನಡೆಸಲಿದೆ.

ದೇಶದಲ್ಲಿ ತಯಾರಾಗಿತ್ತು 122 ಔಷಧ!

ಭಾರತದಲ್ಲಿ ಕರೊನಾ ಆರಂಭವಾದ ಮೊದಲ ನಾಲ್ಕು ತಿಂಗಳಲ್ಲಿ 122 ಔಷಧಗಳು ಸಿದ್ಧವಾಗಿದ್ದವು ಎಂದು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ (ಐಜೆಎಂಆರ್) ವರದಿ ನೀಡಿದೆ. ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ (ಸಿಟಿಆರ್​ಐ)ನಲ್ಲಿ ಕರೊನಾದ 122 ಔಷಧಗಳು ನೋಂದಣಿಯಾಗಿವೆ. ಇದರಲ್ಲಿ 42 ಔಷಧಗಳು ಅಲೋಪಥಿಗೆ ಸಂಬಂಧ ಪಟ್ಟದ್ದಾಗಿದ್ದರೆ, 67 ಔಷಧಗಳು ಹೋಮಿಯೋಪಥಿ, ಆಯುರ್ವೆದ ಮತ್ತು ಯೋಗಾಭ್ಯಾಸಕ್ಕೆ ಸಂಬಂಧಪಟ್ಟವು. ಅದರಲ್ಲಿ 45 ಆಯುರ್ವೆದದ ಔಷಧಗಳಾಗಿದ್ದು, 14 ಹೋಮಿಯೋಪಥಿ ಔಷಧಗಳು. ಈವರೆಗೆ ಸಿಟಿಆರ್​ಐನಲ್ಲಿ ವಿವಿಧ ಕಾಯಿಲೆಯ 27 ಸಾವಿರ ಔಷಧಗಳು ನೋಂದಣಿಯಾಗಿವೆ.

ಪ್ಲಾಸ್ಮಾ ಥೆರಪಿ ಕೈಬಿಡಲು ಚಿಂತನೆ

ದೇಶದಲ್ಲಿ ಕರೊನಾ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿರುವ ಪ್ಲಾಸ್ಮಾ ಚಿಕಿತ್ಸೆಯನ್ನು ನ್ಯಾಷನಲ್ ಹೆಲ್ತ್ ಕ್ಲಿನಿಕಲ್ ಪ್ರೊಟೊಕಾಲ್​ನಿಂದ ಕೈ ಬಿಡುವ ಚಿಂತನೆ ನಡೆಸಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಈ ಚಿಕಿತ್ಸೆಯಿಂದ ಮರಣ ಪ್ರಮಾಣ ಕಡಿಮೆಯಾಗದ ಹಿನ್ನೆಲೆಯಲ್ಲಿ ಈ ಚಿಂತನೆ ನಡೆಸಲಾಗಿದೆ. ಸೋಂಕಿಗೆ ಒಳಗಾದ ವ್ಯಕ್ತಿಯಲ್ಲಿ ಪ್ರತಿಕಾಯವು 5 ತಿಂಗಳ ಕಾಲ ಜೀವಂತವಾಗಿರದಿದ್ದರೆ ಆತನಿಗೆ ಮತ್ತೊಮ್ಮೆ ಸೋಂಕು ತಗುಲುವ ಸಾಧ್ಯತೆಯಿರುತ್ತದೆ ಎಂದು ಐಸಿಎಂಆರ್ ಹೇಳಿದೆ.

50 ಕೋಟಿ ಸಿರಿಂಜ್ ಸಂಗ್ರಹ

2020ರ ವರ್ಷಾಂತ್ಯದೊಳಗೆ 50 ಕೋಟಿ ಸಿರಿಂಜ್​ನ್ನು ಸಂಗ್ರಹ ಮಾಡುವುದಾಗಿ ಯುನಿಸೆಫ್ ತಿಳಿಸಿದೆ. ಔಷಧ ಸಿದ್ಧವಾದ ತಕ್ಷಣ ಸಿರಿಂಜ್ ಅಗತ್ಯತೆ ಹೆಚ್ಚುತ್ತದೆ. ಹಾಗಾಗಿ ಸಿರಿಂಜ್ ಸಂಗ್ರಹ ಮಾಡಲಾಗುತ್ತಿದೆ. 2021ರಲ್ಲಿ 100 ಕೋಟಿ ಸಿರಿಂಜ್ ಸಂಗ್ರಹಿಸುವ ಗುರಿ ಹೊಂದಿದೆ.

ಚೀನಾದ ಸಿನೊವ್ಯಾಕ್ ಸುರಕ್ಷಿತ

ಚೀನಾ ತಯಾರಿಸಿರುವ ಸಿನೊವ್ಯಾಕ್ ಔಷಧದ ಮೂರನೇ ಹಂತದ ಪ್ರಯೋಗ ಬ್ರೆಜಿಲ್​ನಲ್ಲಿ ನಡೆದಿದ್ದು, ಔಷಧ ಸುರಕ್ಷಿತ ಎಂದು ಬ್ರೆಜಿಲ್ ಹೇಳಿದೆ.. 9 ಸಾವಿರ ಜನರ ಮೇಲೆ ಔಷಧ ಪ್ರಯೋಗ ಮಾಡಲಾಗಿತ್ತು. ಅದರಲ್ಲಿ ಕೆಲವು ಜನರು ಮಾತ್ರ, ಚುಚ್ಚುಮದ್ದಿನಿಂದಾಗಿ ನೋವಾಗಿದ್ದಾಗಿ ತಿಳಿಸಿದ್ದಾರೆ. ಸ್ವಲ್ಪ ಜನರಲ್ಲಿ ತಲೆನೋವು, ದೇಹಬಾಧೆಯಂತಹ ಸಣ್ಣ ಪುಟ್ಟ ತೊಂದರೆ ಕಾಣಿಸಿಕೊಂಡಿದೆ. ಉಳಿದಂತೆ ಔಷಧ ಯಾವುದೇ ಪ್ರಮುಖ ದುಷ್ಪರಿಣಾಮವನ್ನು ಉಂಟುಮಾಡಿಲ್ಲ ಎಂದು ತಿಳಿಸಿದೆ.

ಎನ್​ಡಿಎಚ್​ಎಂ ಕಡ್ಡಾಯವಲ್ಲ

ಕರೊನಾ ಔಷಧ ಪಡೆಯಲು ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್​ನ (ಎನ್​ಡಿಎಚ್​ಎಂ) ಗುರುತಿನ ಪತ್ರ ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ. ಡಿಜಿಟಲ್ ಹೆಲ್ತ್ ಕಾರ್ಡ್ ಬಳಸಿಕೊಂಡು ಔಷಧ ವಿತರಣೆ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಸೋಮವಾರದ ಭಾಷಣದಲ್ಲಿ ಹೇಳಿದ್ದರು. ಆದರೆ ಅದು ಕಡ್ಡಾಯವೇನಲ್ಲ. ವೋಟರ್ ಐಡಿ, ಆಧಾರ್ ಕಾರ್ಡ್ ಸೇರಿ ಯಾವುದಾದರೂ ದಾಖಲೆಯ ಆಧಾರದ ಮೇರೆಗೆ ಔಷಧ ವಿತರಣೆ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಂದೇ ನಿಮಿಷದಲ್ಲಿ ಪರೀಕ್ಷೆ

ಒಂದು ನಿಮಿಷದಲ್ಲಿ ಕರೊನಾ ಪತ್ತೆ ಮಾಡಬಲ್ಲ ಪರೀಕ್ಷೆಯನ್ನು ಸಿಂಗಾಪುರದ ತಜ್ಞರು ಅಭಿವೃದ್ಧಿಪಡಿಸಿದ್ದಾರೆ. ಬಳಸಿ ಬಿಸಾಡಬಹುದಾದಂತಹ ಕೊಳವೆಗಳ ಮೂಲಕ ವ್ಯಕ್ತಿಗಳ ಉಸಿರಿನ ಮಾದರಿಯನ್ನು ಪಡೆಯಲಾಗುತ್ತದೆ. ಬಳಿಕ ಅದನ್ನು ಮಾಸ್ ಸ್ಪೆಕ್ಟ್ರೋಮೀಟರ್​ಗೆ ಹಾಕಿದಾಗ 1 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ವರದಿ ದೊರೆಯಲಿದೆ ಎಂದು ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರದ ಸಂಶೋಧಕರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net