

ಬೆಂಗಳೂರು: ನಿನ್ನೆ ಸಂಜೆ 5 ಗಂಟೆಯಿಂದ ರಾಜ್ಯದಲ್ಲಿ 75 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 2493ಕ್ಕೆ ಏರಿಕೆಯಾಗಿದೆ.
ಪ್ರಸ್ತುತ 1635 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 809 ಮಂದಿ ಇದಾಗಲೇ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ 28 ಮಂದಿ ಬಿಡುಗಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಸೋಂಕಿತರ ಪೈಕಿ ಶೇ.50ರಷ್ಟು ಮಂದಿ ಗುಣಮುಖರಾಗಿದ್ದಾರೆ ಎನ್ನುವುದೇ ಸಮಾಧಾನದ ಸಂಗತಿಯಾಗಿದೆ.
ಇದಾಗಲೇ ಕರೊನಾ ವೈರಸ್ ರಾಜ್ಯದಲ್ಲಿ 47 ಮಂದಿಯನ್ನು ಬಲಿ ಪಡೆದಿದೆ. ಯಾವುದೇ ಹೊಸ ಸಾವು ಇಂದು ಸಂಭವಿಸಿಲ್ಲ. ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದ ಬಂದವರಲ್ಲಿಯೇ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿರುವುದು ಇಂದು ಕೂಡ ಮುಂದುವರೆದಿದೆ.
ಹೊಸ ಸೋಂಕಿನ ವಿವರ ಈ ರೀತಿ ಇದೆ:
ಉಡುಪಿ: 27, ಹಾಸನ: 13, ಯಾದಗಿರಿ: 7, ಬೆಂಗಳೂರು ನಗರ: 7, ಚಿತ್ರದುರ್ಗ: 6, ದಕ್ಷಿಣ ಕನ್ನಡ: 4, ಕಲಬುರಗಿ: 3, ಚಿಕ್ಕಮಗಳೂರು: 3, ವಿಜಯಪುರ: 2, ರಾಯಚೂರು: 1
ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಉಚಿತ ಆರೋಗ್ಯ ಸಹಾಯವಾಣಿ 080-29711171 ಸಂಪರ್ಕಿಸುವಂತೆ ಸರ್ಕಾರ ಸೂಚಿಸಿದೆ.
ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್ ಅಪ್ಲಿಕೇಷ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.