

ಬೆಂಗಳೂರು: ದೇಶದಲ್ಲಿ ಕರೊನಾದ ಸಂಭಾವ್ಯ ನಾಲ್ಕನೇ ಅಲೆಗೆ ತಡೆಹಾಕುವ ನಿಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಲಿರುವ ವಿಡಿಯೋ ಸಂವಾದ ಮಹತ್ವ ಪಡೆದುಕೊಂಡಿದೆ. ಥೈಲ್ಯಾಂಡ್, ಜಪಾನ್, ಹಾಂಕಾಂಗ್ ಸೇರಿ ಹಲವು ದೇಶಗಳಲ್ಲಿ ನಾಲ್ಕನೇ ಅಲೆ ಕಾಲಿಟ್ಟಿದೆ. ಇತ್ತ, ದೆಹಲಿ, ಹರಿಯಾಣ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿ ಸೋಂಕು ಪ್ರಕರಣಗಳು ಏರುಗತಿಯಲ್ಲಿವೆ.
ಹಿಂದಿನ ಮೂರು ಅಲೆಗಳ ಅನುಭವದ ಪ್ರಕಾರ ಮುಂದಿನ ಮೂರ್ನಾಲ್ಕು ವಾರಗಳಲ್ಲಿ ರಾಜ್ಯದಲ್ಲೂ ಸೋಂಕು ಪ್ರಕರಣಗಳ ಏರಿಕೆ ಅಂದಾಜಿಸಲಾಗಿದೆ.ಈ ಹಿನ್ನೆಲೆಯಲ್ಲಿ ಬುಧವಾರದ ಸಭೆ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. 4ನೇ ಅಲೆ ಪ್ರವೇಶದ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೊಸ ಪ್ರಭೇದಗಳಿಂದ ಉಂಟಾಗುವ ಸೋಂಕಿನ ಪರಿಣಾಮ, ತೀವ್ರತೆ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ ಕೇಂದ್ರ ಸರ್ಕಾರದ ಸೂಚನೆಯಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡು, ಮಾಸ್ಕ್ ಕಡ್ಡಾಯ ಸೇರಿ ಹಲವು ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ವಿನಂತಿಸಿದೆ.
ಬಿಗಿ ಕ್ರಮಗಳ ಭವಿಷ್ಯ: ಮಾಸ್ಕ್ ಕಡ್ಡಾಯ ಉಲ್ಲಂಘಿಸಿದರೆ ದಂಡ, ಸೋಂಕು ಬಾಧಿತ ನೆರೆಯ ರಾಜ್ಯಗಳಿಂದ ಬರುವ ಜನರ ಮೇಲೆ ನಿಗಾ, ಗಡಿಗಳಲ್ಲಿ ತಪಾಸಣೆ ಇನ್ನಿತರ ಬಿಗಿ ಕ್ರಮಗಳ ಭವಿಷ್ಯವೂ ಬುಧವಾರ ನಿರ್ಧಾರವಾಗಲಿದೆ. ಮೋದಿಯವರು ವಿಡಿಯೋ ಸಂವಾದದಲ್ಲಿ ನೀಡಲಿರುವ ಸಲಹೆ-ಸೂಚನೆಗಳ ಆಧಾರದಲ್ಲಿ ಮತ್ತೊಂದು ಸಭೆ ನಡೆಸಿ, ಇನ್ನಷ್ಟು ಕ್ರಮಗಳ ಬಗ್ಗೆ ತೀರ್ಮಾನ ವಾಗಲಿದೆ ಎಂದು ಸೋಮವಾರದ ಸಭೆ ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದರು.
ಬೊಮ್ಮಾಯಿ ಸಿದ್ಧತೆ: ಸಂಭಾವ್ಯ 4ನೇ ಅಲೆ ಹಾಗೂ ಸೋಂಕು ಪ್ರಕರಣಗಳ ನಿಯಂತ್ರಣ ಕಾರ್ಯತಂತ್ರವನ್ನು ಮೋದಿಗೆ ವಿವರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹಿರಿಯ ಸಚಿವರು, ಕರೊನಾ ಕಾರ್ಯಪಡೆ ಅಧ್ಯಕ್ಷ, ತಜ್ಞರು, ಉನ್ನತಾಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದು, ಸೋಂಕಿನ ಸ್ಥಿತಿಗತಿ, ಆಸ್ಪತ್ರೆಗಳ ವ್ಯವಸ್ಥೆ ಪರಾಮಶಿಸಿದ್ದಾರೆ. ಅಲ್ಲದೆ, ಸಾರ್ವಜನಿಕ ಸ್ಥಳಗಳು, ಪ್ರಯಾಣ, ಕೆಲಸದ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ, ಎರಡು ಅಡಿ ದೈಹಿಕ ಅಂತರ ಪಾಲನೆ ನಿಯಮ ಜಾರಿಗೊಳಿಸಿದ್ದು, ಈ ವಿಷಯವನ್ನು ಮೋದಿಗೆ ವಿವರಿಸಲಿದ್ದಾರೆ.
ಮಂಗಳೂರಿನಿಂದ ಭಾಗಿ: ಮುಖ್ಯಮಂತ್ರಿ ಬೊಮ್ಮಾಯಿ ದಕ್ಷಿಣಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದು, ಬುಧವಾರ ಮಧ್ಯಾಹ್ನ 12ಕ್ಕೆ ನಡೆಯಲಿರುವ ಮೋದಿ ವಿಡಿಯೋ ಸಂವಾದದಲ್ಲಿ ಮಂಗಳೂರಿನಿಂದಲೇ ಭಾಗಿಯಾಗಲಿದ್ದಾರೆ. ಮಂಗಳೂರು ಜಿ.ಪಂ. ಕಚೇರಿಯಲ್ಲಿ ವರ್ಚುವಲ್ ವೇದಿಕೆ ಸಜ್ಜುಗೊಳಿಸಲಾಗಿದೆ.
(ಮಂಗಳವಾರ ದಾಖಲಾದಂತೆ)
ನವದೆಹಲಿ: ಶಾಲಾ ಮಕ್ಕಳಲ್ಲಿ ಕರೊನಾ ಸೋಂಕಿನ ಪ್ರಕರಣಗಳ ಏರಿಕೆಯಾಗುತ್ತಿರುವುದರ ನಡುವೆ, 12 ವರ್ಷದವರೆಗಿನ ಎಳೆಯರಿಗೆ ಲಸಿಕೆ ನೀಡಲು ಭಾರತ ಔಷಧ ಮಹಾ ನಿಯಂತ್ರಣ ಸಂಸ್ಥೆ (ಡಿಸಿಜಿಐ) ಮಂಗಳವಾರ ಅನುಮೋದನೆ ನೀಡಿದೆ. ಇದು ಒಟ್ಟಾರೆಯಾಗಿ ದೇಶದ ಲಸಿಕೆ ಅಭಿಯಾನವನ್ನು ಇನ್ನಷ್ಟು ಬಲಿಷ್ಠಪಡಿಸಲಿದೆ.
ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಯನ್ನು 6ರಿಂದ 12 ವಯೋಮಿತಿಯ ಮಕ್ಕಳಿಗೆ ಹಾಗೂ 5ರಿಂದ 12 ವಯೋಗುಂಪಿನ ಮಕ್ಕಳಿಗೆ ಕೊರ್ಬೆವ್ಯಾಕ್ಸ್ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ಕೊಟ್ಟಿದೆ. ಕೇಂದ್ರೀಯ ಔಷಧ ಮಾನಕ ನಿಯಂತ್ರಣ ಸಂಸ್ಥೆಯ (ಸಿಡಿಎಸ್ಸಿಒ) ವಿಷಯ ತಜ್ಞರ ಸಮಿತಿ ಮಾಡಿರುವ ಶಿಫಾರಸಿನ ಮೇರೆಗೆ ಡಿಸಿಜಿಐ ಈ ಕ್ರಮ ಕೈಗೊಂಡಿದೆ. ಝೈಡುಸ್ ಕ್ಯಾಡಿಲಾದ ಝೈಕೋವ್-ಡಿ ಲಸಿಕೆಯನ್ನು 12 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ ನೀಡಲೂ ಅನುಮತಿಸಲಾಗಿದೆ. ಮೊದಲ 2 ತಿಂಗಳು ಪ್ರತಿ 15 ದಿನಕ್ಕೊಮ್ಮೆ ಹಾಗೂ ನಂತರ 5 ತಿಂಗಳ ವರೆಗೆ ತಿಂಗಳಿಗೊಮ್ಮೆ ಅಡ್ಡ-ಪರಿಣಾಮ ಸಹಿತ ಲಸಿಕೆಯ ಸುರಕ್ಷತಾ ಡೇಟಾ ಸಲ್ಲಿಸುವಂತೆ ವ್ಯಾಕ್ಸಿನ್ ತಯಾರಕರಿಗೆ ಡಿಸಿಜಿಐ ನಿರ್ದೇಶಿಸಿತ್ತು.
187 ಕೋಟಿ ಬೂಸ್ಟರ್ ಡೋಸ್: ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಅನ್ಯವ್ಯಾಧಿಗಳುಳ್ಳ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಲಸಿಕೆಯ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ನೀಡುವ ಕಾರ್ಯ ಕ್ರಮವನ್ನು ಸರ್ಕಾರ ಜನವರಿಯಲ್ಲಿ ಆರಂಭಿಸಿತ್ತು. ಇದುವರೆಗೆ ದೇಶದಾದ್ಯಂತ 187 ಕೋಟಿಗೂ ಅಧಿಕ ಡೋಸ್ ಲಸಿಕೆ ಹಾಕಲಾಗಿದೆ.