ಮಲೆನಾಡಿಗೂ ಕಾಲಿಟ್ಟ ಮಹಾಮಾರಿ

page 1 2
Published on

ಬೆಂಗಳೂರು: ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಗೂ ಕರೊನಾ ವ್ಯಾಪಿಸಿದ್ದು, 8 ಪ್ರಕರಣ ಪತ್ತೆಯಾಗಿವೆ. ಒಟ್ಟಾರೆ ಭಾನುವಾರ ರಾಜ್ಯದಲ್ಲಿ 54 ಜನರಿಗೆ ಸೋಂಕು ತಗುಲಿದರೆ, ಬೆಂಗಳೂರಿನಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ. (ಒಟ್ಟು 31 ಸಾವು) ಸೋಂಕಿತರ ಸಂಖ್ಯೆ 848ಕ್ಕೆ ಏರಿಕೆಯಾಗಿದೆ. 36 ಜನರು ಗುಣಮುಖರಾಗಿ ಮನೆಗೆ ತೆರಳಿರುವುದು ತುಸು ಸಮಾಧಾನಕರ ಸಂಗತಿ.

ಮಹಿಳೆ ಸಾವು: ತೀವ್ರ ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿ ಸಂಖ್ಯೆ 846 ಕಳೆದ ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದರು. ಅವರ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಿದಾಗ ಕರೊನಾ ಸೋಂಕಿರುವುದು ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಕರೊನಾದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 31 ಆಗಿದೆ.

ಅಜ್ಮೇರ್ ಯಾತ್ರೆ ಪರಿಣಾಮ: ಭಾನುವಾರ ಸೋಂಕು ದೃಢಪಟ್ಟ 54 ಸೋಂಕಿತರ ಪೈಕಿ 31 ಜನರು ರಾಜಸ್ಥಾನದ ಅಜ್ಮೇರ್ ಯಾತ್ರೆಯಲ್ಲಿ ಪಾಲ್ಗೊಂಡವರಾಗಿದ್ದಾರೆ. ಅವರಲ್ಲಿ 22 ಸೋಂಕಿತರು ಬೆಳಗಾವಿ ಜಿಲ್ಲೆಯವರಾಗಿದ್ದಾರೆ. ಉಳಿದಂತೆ ಬಾಗಲಕೋಟೆಯ 8, ದಾವಣಗೆರೆಯ ಒಬ್ಬರಾಗಿದ್ದಾರೆ.

ಭಟ್ಕಳದಲ್ಲಿ ಏರಿಕೆ: ಕಳೆದ ಕೆಲದಿನಗಳಿಂದ ಭಟ್ಕಳದಲ್ಲಿ ಕಾಣೆಯಾಗಿದ್ದ ಕರೊನಾ ಸೋಂಕು ಮತ್ತೆ ಕಾಣಿಸಿಕೊಂಡಿದೆ. ರೋಗಿಯೊಬ್ಬರೊಂದಿಗೆ ದ್ವಿತೀಯ ಸಂಪರ್ಕದಲ್ಲಿದ್ದ 7 ಜನರಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಕಲಬುರಗಿಯ ಅಫ್ಜಲಪುರದಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ಪರೀಕ್ಷೆಗೊಳಪಟ್ಟಿದ್ದ ಒಬ್ಬರಿಗೆ ಮತ್ತು ಇನ್​ಫ್ಲೂಯೆನ್ಜಾ ಇಲ್ನೆಸ್​ಗಾಗಿ(ಐಎಲ್​ಐ) ದಾಖಲಾಗಿದ್ದ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಜತೆಗೆ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ್ದ ರೋಗಿ ಸಂಖ್ಯೆ 805 ಕರೊನಾ ಸೋಂಕಿತರಾಗಿದ್ದಾರೆ. ರೋಗಿ ಸಂಖ್ಯೆ 604ರೊಂದಿಗೆ ಸಂಪರ್ಕದಲ್ಲಿದ್ದ ರೋಗಿ ಸಂಖ್ಯೆ 804 ಅವರಿಗೂ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ವಲಯದ ಸಂಪರ್ಕದಲ್ಲಿದ್ದ ಸೋಂಕಿತ, ಐಎಲ್​ಐನಿಂದ ಬಳಲುತ್ತಿದ್ದ ರೋಗಿಗೆ ಸೋಂಕು ದೃಢಪಟ್ಟಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಆತಂಕ: ಹಸಿರು ವಲಯದಲ್ಲಿದ್ದ ಶಿವಮೊಗ್ಗದಲ್ಲಿ ಗುಜರಾತ್​ನ ಅಹಮದಾಬಾದ್​ನಿಂದ ಬಂದವರನ್ನು ತಪಾಸಣೆಗೊಳ ಪಡಿಸಲಾಗಿತ್ತು. ಅದಾದ ನಂತರ ಅವರನ್ನು ಕ್ವಾರಂಟೈನ್​ನಲ್ಲಿಡಲಾಗಿತ್ತು. ಭಾನುವಾರ ಬಂದ ವರದಿಯಂತೆ 8 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ರೋಗಿಗಳ ಪೈಕಿ ಮೂವರು ಶಿವಮೊಗ್ಗ ಜಿಲ್ಲೆ ಶಿಕಾರಿಪುರದವರಾಗಿದ್ದರೆ. ಮತ್ತೋರ್ವ ತೀರ್ಥಹಳ್ಳಿ ತಾಲೂಕಿನವರಾಗಿದ್ದಾರೆ. ಅವರೆಲ್ಲರನ್ನೂ ನಿಗದಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net