ಕರೊನಾಕ್ಕೆ ಕೈಗಾರಿಕೆ ಕಂಗಾಲು, ಎಂಎಸ್​ಎಂಇ ನೌಕರರಿಗೆ ಸಂಬಳ ನೀಡಿಕೆ ಕಷ್ಟ; ಉತ್ಪಾದನೆಗೆ ತೊಂದರೆ

page 10 10
Published on

ಬೆಂಗಳೂರು: ರಾಜ್ಯದ ಅರ್ಧದಷ್ಟು ಉದ್ಯೋಗ ಸೃಷ್ಟಿಸಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ (ಎಂಎಸ್​ಎಂಇ) ವಲಯ ಕೈಗಾರಿಕೆಗಳು ಲಾಕ್​ಡೌನ್​ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದೆ. ಮುಂದಿನ ದಿನಗಳಲ್ಲಿ ವೇತನ ನೀಡದಿರುವ, ಉದ್ಯೋಗ ನಷ್ಟದ ಅಪಾಯವನ್ನೂ ಎದುರಿಸುತ್ತಿದೆ.

ಅತ್ಯವಶ್ಯ ಔಷಧ ಹಾಗೂ ಆಹಾರ ಕ್ಷೇತ್ರ ಹೊರತುಪಡಿಸಿ ಎಲ್ಲ ಕೈಗಾರಿಕೆಗಳೂ ಮುಚ್ಚಲ್ಪಟ್ಟಿವೆ. ಶೇ.50ರವರೆಗೆ ಉತ್ಪನ್ನ ಸರಬರಾಜಿನ ಆದೇಶಗಳು ರದ್ದಾಗಿದ್ದು, ಸಾಲ ಮರುಪಾವತಿ ಹೇಗೆಂಬ ಚಿಂತೆಗೆ ಬಿದ್ದಿವೆ. ತಕ್ಷಣವೇ ಉತ್ಪಾದನೆ, ರಫ್ತಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಉದ್ಯಮ ವಲಯದಲ್ಲಿದೆ. ಇದಕ್ಕೆ ಅನೇಕ ಎಡರು-ತೊಡರುಗಳು ಎದುರಾಗಿವೆ.

ಕರೊನಾ ಕರಿನೆರಳಿನ ವೇಳೆ ಕಾರ್ಯನಿರ್ವಹಿಸದ ಕೈಗಾರಿಕೆಗಳು ಕಾರ್ವಿುಕರನ್ನು ಕೆಲಸದಿಂದ ತೆಗೆಯದಂತೆ ಮತ್ತು ವೇತನ ಕಡಿತ ಮಾಡದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆಲ್ ಇಂಡಿಯಾ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ನಡೆಸಿರುವ ಸಮೀಕ್ಷೆ ಪ್ರಕಾರ, ಶೇ.71 ಎಂಎಸ್​ಎಂಇಗಳು ಸಿಬ್ಬಂದಿಗೆ ವೇತನ ಪಾವತಿಯೇ ಅನುಮಾನ ಎನ್ನುತ್ತಿದೆ. ವಿದೇಶಕ್ಕೆ ರಫ್ತು ಮಾಡಿರುವ ಬೃಹತ್ ಕೈಗಾರಿಕೆಗಳಿಗೆ ಅಲ್ಲಿಂದ ಬಾಕಿಯೂ ಬಂದಿಲ್ಲ.

ಪ್ರಧಾನಿಗೆ ಪತ್ರ: ಎಂಎಸ್​ಎಂಇಗಳ ಹಿತ ಕಾಪಾಡಲು ದಕ್ಷಿಣ ಭಾರತದ ಎಂಎಸ್​ಎಂಇ ಸಂಘಟನೆಗಳು ರಚಿಸಿಕೊಂಡಿರುವ ದಕ್ಷಿಣ ಭಾರತ ಎಂಎಸ್​ಎಂಇ ಜಂಟಿ ಕ್ರಿಯಾ ಸಮಿತಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಪತ್ರ ಬರೆದಿದೆ. ಲಾಕ್​ಡೌನ್ ಮುಂದುವರಿದರೆ ಮತ್ತಷ್ಟು ಸಂಕಷ್ಟ ಹೆಚ್ಚಾಗಲಿದೆ. ಸಾಮಾನ್ಯ ಸ್ಥಿತಿಗೆ ಮರಳುವವರೆಗೆ 3 ತಿಂಗಳು ಹಣಕಾಸು ನೆರವು ನೀಡಬೇಕು. ಪಿಎಫ್ ಹಾಗೂ ಇಎಸ್​ಐ ಪಾವತಿಯನ್ನು ಸೆಪ್ಟೆಂಬರ್​ವರೆಗೆ ವಿಸ್ತರಿಸಲು ಅವಕಾಶ ನೀಡಬೇಕು ಎಂಬುದು ಸೇರಿ ಅನೇಕ ಬೇಡಿಕೆಗಳನ್ನು ಇಟ್ಟಿದೆ.

ಚೇತರಿಕೆಗೆ ಕನಿಷ್ಠ ಒಂದು ವರ್ಷ: ಕೈಗಾರಿಕೆ ವಲಯದಿಂದ ಕೋರಿಕೆ ಸಲ್ಲಿಸಿದರೆ ಉತ್ಪಾದನೆಗೆ, ರಫ್ತಿಗೆ ಅನುಮತಿ ನೀಡಲು ಕೇಂದ್ರ ಸಿದ್ಧವಿದೆ. ರಫ್ತು ಮಾಡಲು ತೊಂದರೆ ಆಗಬಾರದೆಂಬ ಕಾರಣಕ್ಕೆ ದಿನದ 24 ಗಂಟೆಯೂ ಕಸ್ಟಮ್ಸ್ ಕ್ಲಿಯರೆನ್ಸ್​ಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಕರೊನಾ ಸೋಂಕು ಹರಡಬಹುದೆಂಬ ಕಾರಣಕ್ಕೆ ಅಧಿಕಾರಿಗಳು ಬಂದರಿನತ್ತ ಸುಳಿಯುತ್ತಿಲ್ಲ. ಮುಖ್ಯವಾಗಿ ಚೆನ್ನೈ ಮೂಲಕ ಕರ್ನಾಟಕದ ಸರಕುಗಳು ಹೆಚ್ಚಿನ ಪ್ರಮಾಣದಲ್ಲಿ ವಿದೇಶಕ್ಕೆ ರಫ್ತಾಗುತ್ತವೆ. ಈಗಾಗಲೇ ರಫ್ತಿಗೆ ಸಿದ್ಧವಾಗಿರುವ ಉತ್ಪನ್ನಗಳನ್ನು ಹಡಗಿಗೆ ಲೋಡ್-ಅನ್ಲೋಡ್ ಮಾಡುವ ಕಾರ್ವಿುಕರೇ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಉತ್ಪಾದನೆ ಮತ್ತು ರಫ್ತಿಗೆ ಅನುಮತಿ ನೀಡಿದರೂ ಎಲ್ಲಿಗೆ ರಫ್ತು ಮಾಡುವುದು ಎನ್ನುವುದೇ ಪ್ರಶ್ನೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದರೂ ಕೈಗಾರಿಕಾ ಕ್ಷೇತ್ರ ಗತವೈಭವಕ್ಕೆ ಮರಳಲು ಕನಿಷ್ಠ ಒಂದು ವರ್ಷವಾದರೂ ಬೇಕು ಎಂದು ಆಲ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಅಸೋಸಿಯೇಷನ್ ಕರ್ನಾಟಕ ಅಧ್ಯಕ್ಷ ಸಂಪತ್ ರಾಮನ್ ತಿಳಿಸಿದ್ದಾರೆ. ಆನಂತರ ಸುಧಾರಿಸಿಕೊಂಡು ಲಾಭದತ್ತ ಸಾಗಲು ಏನಿಲ್ಲವೆಂದರೂ 2-3 ವರ್ಷ ಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕುಸಿತದಿಂದ ಪಾತಾಳದೆಡೆಗೆ: ಈಗಾಗಲೇ 4-5 ವರ್ಷದಿಂದ ಇಡೀ ವಿಶ್ವದ ಉತ್ಪಾದನಾ ಕ್ಷೇತ್ರ ಕುಸಿತದತ್ತ ಸಾಗಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಕರ್ನಾಟಕದಿಂದ 2015-16ರಲ್ಲಿ 19.26 ದಶಲಕ್ಷ ಅಮೆರಿಕನ್ ಡಾಲರ್​ನಷ್ಟಿದ್ದ ರಫ್ತಿನ ಮೊತ್ತ 2016-17ರಲ್ಲಿ 19.68 ದಶಲಕ್ಷ ಡಾಲರ್, 2017-18ರಲ್ಲಿ 18.05 ದಶಲಕ್ಷ ಡಾಲರ್, 2018-19ರಲ್ಲಿ 17.34 ದಶಲಕ್ಷ ಡಾಲರ್​ಗೆ ಕುಸಿದಿತ್ತು. ಇದೀಗ 2019-20ರ ಅಕ್ಟೋಬರ್​ವರೆಗೆ ಲಭ್ಯ ಅಂಕಿ-ಅಂಶಗಳ ಪ್ರಕಾರ, 10 ದಶಲಕ್ಷ ಡಾಲರ್ ರಫ್ತು ದಾಖಲಾಗಿದೆ. ಇದೀಗ ಕರೊನಾದಿಂದಾಗಿ ಪಾತಾಳದತ್ತ ಸಾಗುತ್ತಿದೆ.

ಉತ್ಪಾದನೆಗೆ ಬೇಡಿಕೆ: ಕೈಗಾರಿಕೆಗಳಿಗೆ ಹಣಕಾಸು ನೆರವು, ಪಾವತಿ ಮುಂದೂಡಿಕೆಯಂಥ ಅವಕಾಶದ ಜತೆಗೆ ಉತ್ಪಾದನೆಗೆ ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಜಂಟಿ ಕ್ರಿಯಾ ಸಮಿತಿ ಮುಂದಿಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಮಿಟಿ ಅಧ್ಯಕ್ಷ ಆರ್. ರಾಜು, ಕೈಗಾರಿಕೆಗಳನ್ನು ತಿಂಗಳುಗಟ್ಟಲೆ ಮುಚ್ಚುವುದರಿಂದ ಸಿಎನ್ಸಿ ಯಂತ್ರಗಳ ಮೆಮೊರಿ ನಷ್ಟವಾಗುವ ಸಾಧ್ಯತೆ ಇದೆ. ವಿದ್ಯುತ್ ವೈರ್​ಗಳನ್ನು ಇಲಿ, ಹೆಗ್ಗಣ ಕಡಿದು ಹಾಳು ಮಾಡಿದರೆ ಲಕ್ಷಾಂತರ ರೂ. ವೆಚ್ಚ ಮಾಡಬೇಕಾಗುತ್ತದೆ. ಬ್ಯಾಕಪ್ ಬ್ಯಾಟರಿಗಳು ನಿಷ್ಕ್ರಿಯವಾಗುತ್ತವೆ. ಹೀಗಾಗಿ, ಕಡಿಮೆ ಸಿಬ್ಬಂದಿ ಜತೆ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.

| ರಮೇಶ ದೊಡ್ಡಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net