

ವಾಷಿಂಗ್ಟನ್: ಮಾರಕ ಕರೊನಾ ಸೋಂಕಿನ ಕಾರಣ ಆತಂಕಗೊಂಡಿರುವ ವಿದೇಶಿ ಹೂಡಿಕೆದಾರರು, ಬಂಡವಾಳ ಹಿಂಪಡೆಯುತ್ತಿರುವುದರಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಏಷ್ಯಾ ರಾಷ್ಟ್ರಗಳಲ್ಲಿ 2 ಲಕ್ಷ ಕೋಟಿ (26 ಬಿಲಿಯನ್ ಡಾಲರ್) ರೂಪಾಯಿ ಹೂಡಿಕೆ ಹಿಂತೆಗೆಯಲಾಗಿದೆ. ಭಾರತದಲ್ಲಿ ಈ ಪ್ರಮಾಣ 1.21 ಲಕ್ಷ ಕೋಟಿ ರೂಪಾಯಿ ಆಗಿದೆ. ಇಷ್ಟಾದರೂ ಭಾರತ, ಚೀನಾ, ಇಂಡೋನೇಷ್ಯಾಗಳ ಆರ್ಥಿಕತೆ ಮೇಲೆ ಕರೊನಾ ಪರಿಣಾಮ ಇತರ ದೇಶಗಳಷ್ಟು ದೊಡ್ಡ ಪ್ರಮಾಣದಲ್ಲಿ ಇಲ್ಲ ಎಂದು ಅಮೆರಿಕದ ಸಂಸದೀಯ ಸಂಶೋಧನಾ ಕೇಂದ್ರದ ಕರೊನಾ ಪರಿಣಾಮ ಕುರಿತ ವರದಿ ಹೇಳಿದೆ.
ನೀತಿಗಳಲ್ಲಿನ ಭಿನ್ನಾಭಿಪ್ರಾಯವು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ. ಇದರಿಂದ ಯುರೋ ವಲಯದಲ್ಲಿ ಉತ್ತರ ಮತ್ತು ದಕ್ಷಿಣ ಭಾಗಗಳ ದೇಶಗಳ ಸಂಬಂಧವನ್ನು ಬಿಗಡಾಯಿಸುವಂತೆ ಮಾಡಿದೆ. ಇದರ ಪರಿಣಾಮ ಜಾಗತಿಕ ಆರ್ಥಿಕತೆಯ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಲಾಕ್ಡೌನ್ ಕಾರಣ ವಿಮಾನ ಸಂಚಾರ ಸ್ಥಗಿತಗೊಂಡಿರುವುದರಿಂದ ಅಂದಾಜು 8.55 ಲಕ್ಷ ಕೋಟಿ (113 ಬಿಲಿಯನ್ ಡಾಲರ್) ರೂಪಾಯಿ ನಷ್ಟವಾಗಿದೆ. ಪ್ರವಾಸೋದ್ಯಮ ನೆಲಕಚ್ಚಿದೆ. ಶಾಲಾ- ಕಾಲೇಜುಗಳು ಮುಚ್ಚಿರುವುದರಿಂದ ವಿಶ್ವದಾದ್ಯಂತ 150 ಕೋಟಿ ಮಕ್ಕಳು ಮನೆಯಲ್ಲೇ ಇರುವಂತಾಗಿದೆ. ಜನರ ಸಂಚಾರ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಚೀನಾ, ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್ಗಳಲ್ಲಿ ಕೈಗಾರಿಕೆಗಳು ಲಾಕ್ಡೌನ್ ವೇಳೆಯಲ್ಲಿ ಬಾಗಿಲು ಮುಚ್ಚಿವೆ. ಇವೆಲ್ಲದರ ಪರಿಣಾಮ ವ್ಯಾಪಾರ ವಹಿವಾಟು ಸ್ತಬ್ಧಗೊಂಡಿವೆ.
ಆತ್ಮವಿಶ್ವಾಸಕ್ಕೆ ಪೆಟ್ಟು: ಕರೊನಾ ಹೊಡೆತದಿಂದ ಆರ್ಥಿಕತೆ ಚೇತರಿಸಿಕೊಳ್ಳಲು ಬಹಳ ಕಾಲ ಬೇಕಾಗುತ್ತದೆ. ಮಾರಕ ಸೋಂಕು ಆರೋಗ್ಯ ಮೇಲೆ ಮಾತ್ರವಲ್ಲ ಜನರ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರಿದೆ. ಆತ್ಮವಿಶ್ವಾಸವೇ ಕ್ಷೀಣಿಸಿದ್ದಾಗ ವ್ಯಾಪಾರೋದ್ಯಮದಲ್ಲಿ ಹೂಡಿಕೆ ಕಷ್ಟಸಾಧ್ಯ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಇತ್ತೀಚಿನ ವರದಿಯೊಂದು ತಿಳಿಸಿದೆ.