

ನವದೆಹಲಿ: ಕಳೆದ ಒಂದು ವಾರದಲ್ಲಿ ಭಾರತದಲ್ಲಿ ಕರೊನಾ ಸೋಂಕಿನ ಪ್ರಕರಣಗಳು ದುಪ್ಪಟ್ಟಾಗಿದ್ದು ಕನಿಷ್ಠ 12 ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಏಪ್ರಿಲ್ 18ರಿಂದ 24ರ ವರೆಗಿನ ಏಳು ದಿನದಲ್ಲಿ ದೇಶದಲ್ಲಿ 15,700ಕ್ಕೂ ಅಧಿಕ ಕೇಸ್ಗಳು ದೃಢಪಟ್ಟಿವೆ. ಅದಕ್ಕೂ ಹಿಂದಿನ ವಾರದಲ್ಲಿ 8,050 ಪ್ರಕರಣ ವರದಿಯಾಗಿದ್ದು ಒಂದು ವಾರದಲ್ಲಿ ಶೇಕಡ 95 ಏರಿಕೆ ದಾಖಲಾಗಿದೆ. ಸತತ 11 ವಾರ ಸೋಂಕು ಇಳಿಕೆಯಾದ ನಂತರ ಈ ಎರಡು ವಾರಗಳಲ್ಲಿ ವ್ಯಾಧಿಪೀಡಿತರ ಸಂಖ್ಯೆ ಹೆಚ್ಚಾಗಿದೆ. ಹಿಂದಿನ ವಾರದಲ್ಲಿ ಹೆಚ್ಚಿದ ಸೋಂಕಿನಲ್ಲಿ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ಪಾಲು ಹೆಚ್ಚಿದೆ. ರಾಷ್ಟ್ರ ರಾಜಧಾನಿ ಪ್ರದೇಶದ (ಎನ್ಸಿಆರ್) ನಗರಗಳಲ್ಲೇ ಅಧಿಕ ಪ್ರಕರಣಗಳು ದಾಖಲಾಗಿವೆ. ನಂತರ, ಏಪ್ರಿಲ್ 24ರಂದು ಅಂತ್ಯವಾದ ವಾರದಲ್ಲಿ ಕರ್ನಾಟಕ ಸಹಿತ ಇನ್ನೂ ಒಂಬತ್ತು ರಾಜ್ಯಗಳಲ್ಲಿ ಕರೊನಾ ಸೋಂಕಿನಲ್ಲಿ ಏರಿಕೆ ಕಂಡು ಬಂದಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡು, ಬಂಗಾಳ, ರಾಜಸ್ಥಾನ ಮತ್ತು ಪಂಜಾಬ್ ಅವುಗಳಲ್ಲಿ ಪ್ರಮುಖವಾಗಿವೆ.
ಹೆಚ್ಚುತ್ತಿರುವ ಪ್ರತಿರೋಧ: ಚೀನಾದಲ್ಲಿ ಅನುಸರಿಸಲಾಗುತ್ತಿರುವ ಝೀರೋ ಕೋವಿಡ್ ನೀತಿಗೆ ಪ್ರತಿರೋಧ ಹೆಚ್ಚಾಗುತ್ತಿದೆ. ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಆರ್ಥಿಕತೆಗೆ ಹಾನಿಯಾಗಿದೆ ಎಂಬ ಭೀತಿಯ ನಡುವೆ ಎಣ್ಣೆ ಮತ್ತು ಕಬ್ಬಿಣ ಅದಿರಿನ ಷೇರು ಮೌಲ್ಯ ಕುಸಿದಿದೆ. ಇಡೀ ಶಾಂಘೈ ನಗರದಲ್ಲಿ ಲಾಕ್ಡೌನ್ ಹೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಜನರು ಗಾಬರಿಯಿಂದ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ.
ಸಕ್ರಿಯ ಕೇಸ್ 16,522ಕ್ಕೆ ಏರಿಕೆ: ಭಾರತದಲ್ಲಿ ಸೋಮವಾರ ಕರೊನಾ ಸೋಂಕಿನ 2,541 ಹೊಸ ಕೇಸ್ಗಳು ದೃಢಪಟ್ಟಿದ್ದು 30 ಜನರು ಮೃತಪಟ್ಟಿದ್ದಾರೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 16,522ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಬೀಜಿಂಗ್ನಲ್ಲಿ ಸಾಮೂಹಿಕ ಪರೀಕ್ಷೆ: ಚೀನಾದ ವಾಣಿಜ್ಯ ಕೇಂದ್ರ ಶಾಂಘೈಯಲ್ಲಿ ನಾಲ್ಕನೇ ವಾರವೂ ಕರೊನಾ ಸೋಂಕಿನ ಅಬ್ಬರ ಮುಂದುವರಿದಿದ್ದು ಸೋಮವಾರ ಒಂದೇ ದಿನ 51 ಜನರು ಬಲಿಯಾಗಿದ್ದಾರೆ. ಇದು ಗರಿಷ್ಠ ದೈನಿಕ ಸಾವಾಗಿದೆ. ಈ ನಡುವೆ, ಚೀನಾ ರಾಜಧಾನಿ ಬೀಜಿಂಗ್ನ ಒಂದು ಪ್ರಮುಖ ಜಿಲ್ಲೆಯಲ್ಲಿ ಮೂರು ದಿನ ಕಾಲದ ಸೋಂಕು ಪತ್ತೆಯ ಸಾಮೂಹಿಕ ಪರೀಕ್ಷೆ ಸೋಮವಾರ ಆರಂಭವಾಗಿದೆ. 35 ಲಕ್ಷ ಜನಸಂಖ್ಯೆಯ ಚಾವೋಯಾಂಗ್ ಜಿಲ್ಲೆಯ ನಿವಾಸಿಗಳು ಮೂರು ಸುತ್ತಿನ ಸಾಮೂಹಿಕ ನ್ಯೂಕ್ಲಿಕ್ ಆಸಿಡ್ ಟೆಸ್ಟ್ಗೆ ಒಳಪಡಬೇಕೆಂದು ಅಧಿಕಾರಿಗಳು ಆದೇಶಿಸಿದ್ದಾರೆ. ಸೋಂಕಿನ ಇತ್ತೀಚಿನ ಅಬ್ಬರದ ವೇಳೆ ಈ ಜಿಲ್ಲೆಯಲ್ಲೇ ಅತಿ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದರಿಂದ ಸರ್ಕಾರ ಸಾಮೂಹಿಕ ಪರೀಕ್ಷೆಗೆ ಮುಂದಾಗಿದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಪರೀಕ್ಷೆ ನಡೆಯಲಿದೆ. ಭಾನುವಾರ ಚೀನಾದಲ್ಲಿ 20,190 ಹಾಗೂ ಶಾಂಘೈಯಲ್ಲಿ 2,472 ಪಾಸಿಟಿವ್ ಕೇಸ್ಗಳು ವರದಿಯಾಗಿವೆ.