

ಬೆಂಗಳೂರು: ಕರೊನಾ ಸೋಂಕಿನಿಂದ ರಾಜ್ಯದಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸಿದ್ದರೂ, ಸರ್ಕಾರ ಮಾಹಿತಿಗಳನ್ನು ಮುಚ್ಚಿಡುತ್ತಿದೆ ಎಂದು ಶಾಸಕ ಎಚ್.ಕೆ. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಅಂಕಿ-ಅಂಶ ಬಚ್ಚಿಟ್ಟು, ಜನರಿಗೆ ತಪ್ಪು ಮಾಹಿತಿ ನೀಡುವುದರಿಂದ ಪ್ರಯೋಜನವಿಲ್ಲ. ಗಂಭೀರ ಸನ್ನಿವೇಶದಲ್ಲಿ ವಿರೋಧ ಪಕ್ಷಗಳು, ತಜ್ಞರು ಮತ್ತು ವೈದ್ಯರ ತುರ್ತು ಸಭೆ ಕರೆದು ಚರ್ಚಿಸಬೇಕು. ತಕ್ಷಣದ ಕ್ರಮ ಕೈಗೊಳ್ಳಲು ಮತ್ತು ವಸ್ತುಸ್ಥಿತಿ ತಿಳಿಸಲು ಮುಂದಾಗಬೇಕು ಎಂದು ಸರ್ಕಾರಕ್ಕೆ ಎಚ್.ಕೆ. ಪಾಟೀಲ್ ಸಲಹೆ ನೀಡಿದರು.
ರಾಜ್ಯದಲ್ಲಿ ಕರೊನಾ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸರ್ಕಾರ ಈ ವರ್ಷ ಡೆತ್ ಆಡಿಟ್ ಮಾಡಿಲ್ಲ. ಸಾವು ಯಾವ ಕಾರಣಕ್ಕೆ ಆಯ್ತು ಎನ್ನುವ ಮಾಹಿತಿ ನೀಡಿಲ್ಲ. ಉಸಿರಾಟ ಸಮಸ್ಯೆಯಿಂದ ಶೇ.8.2- 8.5 ಮೃತಪಟ್ಟಿರುವ ಮಾಹಿತಿ ಇದೆ. ಆದ್ದರಿಂದ ಈ ಸಾವಿನ ಬಗ್ಗೆ ಸಿಎಂ ಯಡಿಯೂರಪ್ಪ ಉತ್ತರಿಸಬೇಕು. ತ್ವರಿತವಾಗಿ ಅಧ್ಯಯನ ವರದಿ ಪಡೆಯಲು ಮುಂದಾಗಬೇಕು ಎಂದು ಆಗ್ರಹಿಸಿದರು.