ವ್ಯವಸ್ಥೆ ಸನ್ನದ್ಧಗೊಳಿಸಿ.. ಹೆಚ್ಚುತ್ತಿರುವ ಕರೊನಾ ಅಪಾಯ...

Editorial
Published on

ಕರೊನಾ ಸೋಂಕಿನ ಎರಡನೇ ಅಲೆ ದೇಶದಾದ್ಯಂತ ತೀವ್ರತೆ ಪಡೆದುಕೊಂಡಿದೆ. ಇದೇ ಮೊದಲ ಬಾರಿ ದೈನಿಕ ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿಯನ್ನು ದಾಟಿರುವುದು, ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಛತ್ತೀಸ್​ಗಢ, ಮಧ್ಯಪ್ರದೇಶ, ರಾಜಸ್ಥಾನ ಸೇರಿ ಎಂಟು ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ. ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 8ಕ್ಕೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆಯನ್ನು ನಡೆಸಲಿದ್ದಾರೆ. ಈ ನಡುವೆ ಕರ್ನಾಟಕದ ಪರಿಸ್ಥಿತಿಯೂ ಸಮಾಧಾನಕರವಾಗಿಲ್ಲ. ಎರಡನೇ ಅಲೆಯ ತೀಕ್ಷ್ಣತೆಯ ಕಾರಣದಿಂದ ಮೇ ಹೊತ್ತಿನಲ್ಲಿ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರ ವರದಿಯನ್ನು ಉಲ್ಲೇಖಿಸಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7.50 ಲಕ್ಷದ ಗಡಿ ದಾಟಿದ್ದರೆ, ಕರ್ನಾಟಕದಲ್ಲಿ 42 ಸಾವಿರಕ್ಕಿಂತ ಅಧಿಕ. ಪರಿಸ್ಥಿತಿ ಹೀಗೆ ಮುಂದುವರಿದ್ದಲ್ಲಿ ಇನ್ನೊಂದು ತಿಂಗಳ ಅವಧಿಯಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉಂಟಾಗಬಹುದು. ಈ ಹಿನ್ನೆಲೆ ಯಲ್ಲಿ ಬೆಂಗಳೂರಿನ ಎಲ್ಲ ಖಾಸಗಿ ಆಸ್ಪತ್ರೆಗಳು ಇನ್ನೆರಡು ದಿನದಲ್ಲಿ ಶೇ.20 ಹಾಸಿಗೆ ಮೀಸಲಿಡಬೇಕು, ಪಾಲಿಕೆ ಸೂಚಿಸಿದ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಬೇಕು ಎಂದು ಬಿಬಿಎಂಪಿ ಸೂಚಿಸಿದೆ. ಈ ಹಿಂದೆ ಖಾಸಗಿ ಆಸ್ಪತ್ರೆಗಳ ಶೇಕಡ 50 ಹಾಸಿಗೆ ಮೀಸಲಿಡಲಾಗಿತ್ತು, ಸೋಂಕು ಪ್ರಕರಣಗಳು ಕಡಿಮೆಯಾದ ನಂತರ ಆ ಆದೇಶವನ್ನು ಹಿಂಪಡೆಯಲಾಗಿತ್ತು. ಅಲ್ಲದೆ, ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅನುವಾಗುವಂತೆ ಎರಡು ಸಾವಿರ ಹೋಮ್​ಗಾರ್ಡ್​​ಗಳನ್ನು ನೇಮಿಸಲಾಗುತ್ತಿದೆ. ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ.

ಕಳೆದ ವರ್ಷದ ಪರಿಸ್ಥಿತಿ ಭಿನ್ನವಾಗಿತ್ತು. ಕರೊನಾದ ತೀವ್ರತೆ, ನೀಡಬೇಕಾದ ಚಿಕಿತ್ಸೆ, ಅವಶ್ಯಕ ಹಾಸಿಗೆಗಳ ಪ್ರಮಾಣ ಸೇರಿದಂತೆ ಯಾವುದೇ ಸಂಗತಿಗಳ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಇದರ ಪರಿಣಾಮ ಖಾಸಗಿ ಆಸ್ಪತ್ರೆಗಳು ಕರೊನಾ ಹೆಸರಿನಲ್ಲಿ ರೋಗಿಗಳಿಂದ ಭಾರಿ ಮೊತ್ತವನ್ನೇ ವಸೂಲಿ ಮಾಡಿದವು. ಹಲವೆಡೆ ಆರೋಗ್ಯ ಇಲಾಖೆ ಮಧ್ಯಪ್ರವೇಶಿಸಿ ಆಸ್ಪತ್ರೆಗಳಿಂದ ಹೆಚ್ಚುವರಿ ಹಣವನ್ನು ರೋಗಿಗಳಿಗೆ ಮರುಪಾವತಿಸಿದ್ದ ಘಟನೆಗಳು ನಡೆದವು. ಈ ಬಾರಿಯೂ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇರುವುದರಿಂದ, ಈ ಹಿಂದಿನ ತಪು್ಪಗಳು ನುಸುಳದಂತೆ ಎಚ್ಚರ ವಹಿಸಬೇಕು. ಜನರಿಗೆ ಕೈಗೆಟಕುವ ದರದಲ್ಲಿ ಸೂಕ್ತ ಚಿಕಿತ್ಸೆ ದೊರೆಯುವಂತಾಗಬೇಕು. ಹಾಸಿಗೆ ಇದ್ದರೂ ‘ಭರ್ತಿಯಾಗಿವೆ’ ಎಂಬ ನೆಪವನ್ನು ಖಾಸಗಿಯವರು ಹೇಳಬಾರದು. ಸರ್ಕಾರದ ಕೋವಿಡ್ ಆರೈಕೆ ಕೇಂದ್ರಗಳು ಗುಣಮಟ್ಟದ ಚಿಕಿತ್ಸೆಗೆ ಆದ್ಯತೆ ನೀಡಬೇಕು. ಲಸಿಕೆ ನೀಡಿಕೆ ಪ್ರಕ್ರಿಯೆಯೂ ವೇಗ ಪಡೆಯಲಿರುವುದು ಸಮಾಧಾನಕರ ಬೆಳವಣಿಗೆ. ಆದರೆ, ಮುಂದಿನ ದಿನಗಳ ಅಪಾಯವನ್ನು ಗ್ರಹಿಸಿ, ಅದನ್ನು ಎದುರಿಸಲು ವ್ಯವಸ್ಥೆಯನ್ನು ಸನ್ನದ್ಧವಾಗಿ ಇರಿಸುವುದು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net