

ನವದೆಹಲಿ: ದೇಶದಲ್ಲಿ ಕರೊನಾ ಸಾಂಕ್ರಾಮಿಕ ಹೆಚ್ಚುತ್ತಿದ್ದು, ನಿತ್ಯದ ಕೇಸ್ ಪ್ರಮಾಣ ಶೇಕಡ ಒಂದನ್ನು ಮೀರಿ ಕಳವಳ ಹುಟ್ಟಿಸಿದೆ. ಭಾನುವಾರ ಬೆಳಗ್ಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ ಹೊಸ ಸೋಂಕಿನ 4,270 ಪ್ರಕರಣಗಳು ದೃಢಪಟ್ಟಿದ್ದು. ಮೇ 29ರಂದು 2,828 ಕೇಸ್ಗಳು ವರದಿಯಾಗಿದ್ದು ಒಂದೇ ವಾರದಲ್ಲಿ ದುಪ್ಪಟ್ಟುಗೊಂಡಿದೆ. 24 ತಾಸಿನಲ್ಲಿ ದೇಶದಲ್ಲಿ 15 ಜನರು ಮೃತಪಟ್ಟಿದ್ದಾರೆ. 34 ದಿನಗಳಲ್ಲಿ ಇದೇ ಮೊದಲ ಬಾರಿಗೆ ದೈನಿಕ ಪಾಸಿಟಿವಿಟಿ ದರ ಶೇಕಡ 1ಕ್ಕಿಂತ ಹೆಚ್ಚಾಗಿದೆ ಸಕ್ರಿಯ ಪ್ರಕರಣಗಳ ಸಂಖ್ಯೆ 24,052ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರದಲ್ಲಿ 1,494 ಮತ್ತು ಕೇರಳದಲ್ಲಿ 1,544 ಹೊಸ ಕೋವಿಡ್ ಪ್ರಕರಣಗಳು ಕಂಡು ಬಂದಿದೆ. ಇದರಿಂದ ರಾಷ್ಟ್ರೀಯ ಪಾಸಿಟಿವಿಟಿ ದರ ಏರಿಕೆ ಆಗಿದೆ. ಕೇರಳದಲ್ಲಿ ಕಳೆದ ಐದು ದಿನಗಳಿಂದ ದೈನಿಕ ಒಂದು ಸಾವಿರಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ ಸಕ್ರಿಯ ಪ್ರಕರಣಗಳ ಸಂಖ್ಯೆ 7,972ಕ್ಕೆ ಏರಿದೆ.
ಶಾರುಕ್, ಕತ್ರಿನಾಗೆ ಕರೊನಾ: ಬಾಲಿವುಡ್ ನಟ ಶಾರುಕ್ ಖಾನ್ ಮತ್ತು ನಟಿ ಕತ್ರಿನಾ ಕೈಫ್ಗೆ ಕರೊನಾ ಸೋಂಕು ತಗುಲಿದೆ ಎಂದು ಮೂಲಗಳು ತಿಳಿಸಿವೆ.
780 ಮಂಕಿಪಾಕ್ಸ್ ಕೇಸ್: ಜಗತ್ತಿನ ವಿವಿಧ ಭಾಗಗಳಲ್ಲಿ 780ಕ್ಕೂ ಹೆಚ್ಚು ಜನರಿಗೆ ಮಂಕಿಪಾಕ್ಸ್ ಸೋಂಕು ತಟ್ಟಿರುವ ಸಾಧ್ಯತೆಯಿದೆ ಎಂದು ಅಮೆರಿಕದ ವ್ಯಾಧಿ ನಿಯಂತ್ರಣ ಮತ್ತು ತಡೆ ಕೇಂದ್ರ ಹೇಳಿದೆ. ಅಮೆರಿಕದಲ್ಲಿ 21 ಮಂಕಿಪಾಕ್ಸ್ ಪೀಡಿತರಿದ್ದಾರೆ.
4ನೇ ಅಲೆಯ ಸೂಚನೆಯಲ್ಲ: ಭಾರತದಲ್ಲಿ ಈಗ ಕರೊನಾ ಪ್ರಕರಣಗಳಲ್ಲಿ ಆಗುತ್ತಿರುವ ಏರಿಕೆ ಸೋಂಕಿನ ನಾಲ್ಕನೇ ಅಲೆಯ ಸೂಚನೆ ಅಲ್ಲ ಎಂದು ಮುಂಬೈಯ ಸೋಂಕು ತಜ್ಞ ಡಾ. ಈಶ್ವರ್ ಗಿಲಾಡಾ ಹೇಳಿದ್ದಾರೆ.
ಅನಾಥ ವಿದ್ಯಾರ್ಥಿನಿಗೆ ಸಾಲ ವಸೂಲಿ ನೋಟಿಸ್: ಕರೊನಾ ಕಾರಣ ಹೆತ್ತವರನ್ನು ಕಳೆದುಕೊಂಡ ಅನಾಥರಾದ ಮಕ್ಕಳ ಶಿಕ್ಷಣ ಹಾಗೂ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಯೋಜನೆಗಳನ್ನು ಪ್ರಕಟಿಸಿದ್ದರೂ ಮಧ್ಯಪ್ರದೇಶದ ಭೋಪಾಲ್ನ ಪ್ರತಿಭಾವಂತ ಅನಾಥ ವಿದ್ಯಾರ್ಥಿನಿಯೊಬ್ಬಳಿಗೆ ಆಕೆಯ ತಂದೆ ತೆಗೆದುಕೊಂಡಿದ್ದ ಗೃಹ ಸಾಲದ ವಸೂಲಿಗೆ ನೋಟಿಸ್ ನೀಡಲಾಗಿದೆ. ಕೋವಿಡ್ನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ವನಿಶಾ ಪಾಠಕ್, 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡ 99.8 ಅಂಕ ಗಳಿಸಿದ್ದಳು.