

ಬೆಂಗಳೂರು: ಹೊಸ ರೂಪಾಂತರ ಕರೊನಾ ಸೋಂಕಿನ ಬೀತಿ ಹಿನ್ನೆಲೆ ರಾಜ್ಯಾದ್ಯಂತ ಡಿ.24ರಿಂದ ಜ.2ರ ವರೆಗೆ ರಾತ್ರಿ 11ರಿಂದ ಬೆಳಗಿನ ಜಾವ 5ರ ವರೆಗೆ ಕರ್ಫ್ಯೂ ಜಾರಿ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, ಉದ್ದೇಶಿತ ಶಾಲಾ-ಕಾಲೇಜುಗಳ ಪುನರಾರಂಭ ಸದ್ಯಕ್ಕೆ ಅಬಾಧಿತ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ನಡೆದ ಕರೊನಾ ತಾಂತ್ರಿಕ ಸಲಹಾ ಸಮಿತಿ ಹಾಗೂ ಉನ್ನತಾಧಿಕಾರಿಗಳ ಸಭೆ ಬಳಿಕ ಈ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಪದವಿ ಕಾಲೇಜುಗಳು ಈಗಾಗಲೇ ಪ್ರಾರಂಭವಾಗಿವೆ. ಹೊಸ ವರ್ಷ 2021ರ ಜ.1ರಿಂದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳು ಹಾಗೂ 6ರಿಂದ 9ನೇ ತರಗತಿವರೆಗೆ ವಿದ್ಯಾಗಮ ಕಾರ್ಯಕ್ರಮ ಪುನರಾರಂಭಿಸುವ ತೀರ್ಮಾನದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯಿಲ್ಲ. ಮುಂದಿನ ಬೆಳವಣಿಗೆಯನ್ನು ಅವಲೋಕಿಸಿದ ಬಳಿಕ ಮತ್ತೊಮ್ಮೆ ಸಭೆ ಸೇರಿ ಶಾಲಾ-ಕಾಲೇಜುಗಳ ಪುನರಾರಂಭ ನಿರ್ಣಯ ಮರು ಪರಿಶೀಲಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು. ಇದನ್ನೂ ಓದಿರಿ ನೈಟ್ ಕರ್ಫ್ಯೂ ದಿನಾಂಕ-ಸಮಯದಲ್ಲಿ ಬದಲಾವಣೆ: ಸಿಎಂ ಯಡಿಯೂರಪ್ಪ
ಸೋಂಕು ಹರಡುವಿಕೆ ತಡೆಯಲು ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಪೂರಕವಾಗಿ ಜನರು ಮುನ್ನೆಚ್ಚರಿಕೆ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಮನವಿ ಮಾಡಿದರು.
ಬ್ರಿಟನ್ನಿಂದ ಕಳೆದ 2 ದಿನಗಳಲ್ಲಿ ರಾಜ್ಯಕ್ಕೆ ಬಂದು ಕೋವಿಡ್ ತಪಾಸಣೆಗೆ ಒಳಗಾಗದ 138 ಜನರ ರಕ್ತದ ಮಾದರಿ ಸಂಗ್ರಹಿಸಿ ತಪಾಸಣೆಗೆ ರವಾನಿಸಲಾಗಿದೆ. ಈ ವರದಿ ಕೈಸೇರಲು ಎರಡ್ಮೂರು ದಿನ ಬೇಕು. ನಂತರ ಸೂಕ್ತ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿದೆ. ಹೊಸ ಪ್ರಬೇಧ ಕರೊನಾ ಸೋಂಕು ಪತ್ತೆಯಾದರೆ ಇನ್ನಷ್ಟು ಬಿಗಿಕ್ರಮ ಕೈಗೊಳ್ಳುವುದು ಅನಿರ್ವಾಯವಾಗಲಿದೆ. ಬಹುಶಃ ಡಿ.27ರ ಬಳಿಕ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಸೇರುವ ಸಭೆಯು ಶಾಲಾ-ಕಾಲೇಜುಗಳ ಪುನರಾರಂಭದ ಭವಿಷ್ಯ ನಿರ್ಧರಿಸಲಿವೆ.