ಕೋವಿಡ್ ಪ್ರಸರಣ ತಡೆದ ಮುಂಬೈ ಮಾದರಿ; ಪ್ರಧಾನಿಯಿಂದ ಮೆಚ್ಚುಗೆ

corona
Published on

ನವದೆಹಲಿ: ಮಾರ್ಚ್ ಮತ್ತು ಏಪ್ರಿಲ್ ಮಧ್ಯಭಾಗದವರೆಗೂ ದೇಶದಲ್ಲಿ ಅತ್ಯಧಿಕ ಕರೊನಾ ಪ್ರಕರಣ ವರದಿಯಾಗುತ್ತಿದ್ದ ನಗರ ಮುಂಬೈ, ಈಗ ಸೋಂಕು ಹತೋಟಿಗೆ ತರುವಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ ಕೈಗೊಂಡ ಕ್ರಮವನ್ನು ಶ್ಲಾಘಿಸಿರುವ ಕೇಂದ್ರ ಸರ್ಕಾರ ಈ ಮಾದರಿಯನ್ನು ಇಡೀ ದೇಶ ಅನುಸರಿಸಬೇಕು ಎಂದು ಹೇಳಿದೆ. ಆಕ್ಸಿಜನ್ ಕೊರತೆ ಮತ್ತು ಪೂರೈಕೆ ಕುರಿತ ವ್ಯಾಜ್ಯದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ನ್ಯಾಯಪೀಠ ಕೂಡ ಮುಂಬೈ ಪಾಲಿಕೆಯ ಸಮರೋಪಾದಿ ಸೇವೆಯನ್ನು ಪ್ರಶಂಸಿಸಿತು. ಕೋವಿಡ್ ಪರಿಸ್ಥಿತಿ ಕುರಿತು ಸಿಎಂಗಳ ಜತೆ ಚರ್ಚೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಮುಂಬೈ ಪಾಲಿಕೆಯನ್ನು ಶ್ಲಾಘಿಸಿದ್ದರು.

ಮುಂಬೈನಲ್ಲಿ ಏಪ್ರಿಲ್ 4ಕ್ಕೆ ಸೋಂಕಿನ ದೈನಿಕ ಸಂಖ್ಯೆ 11,163 ಇತ್ತು. 19ರ ವೇಳೆಗೆ 8,000ದ ಆಸುಪಾಸಿಗೆ ಬಂದು, ಏಪ್ರಿಲ್ 25ಕ್ಕೆ 5,888ಕ್ಕೆ ಇಳಿಕೆಯಾಗಿತು. ಈಗ ಇದು 1,794ಕ್ಕೆ ಕುಸಿದಿದೆ. ಇದು ಎರಡು ತಿಂಗಳಲ್ಲೇ ಅತ್ಯಂತ ಕಡಿಮೆ ದೈನಿಕದ ಸಂಖ್ಯೆ ಆಗಿದೆ. ಮಂಗಳವಾರ 50 ಸೋಂಕಿತರು ಸಾವನ್ನಪ್ಪಿದ್ದು, ತಿಂಗಳ ಹಿಂದೆ ಈ ಪ್ರಮಾಣ ಮೂರು ಪಟ್ಟು ಹೆಚ್ಚಿತ್ತು.

ವೈದ್ಯಕೀಯ ಮೂಲ ಸೌಕರ್ಯ: ವಾರ್ ರೂಂಗಳಲ್ಲಿ ಸೇವೆ ಸಲ್ಲಿಸುವ ವೈದ್ಯರು ಮತ್ತು ಇನ್ನಿತರ ಸಿಬ್ಬಂದಿಗೆ ಸ್ಟೇಫಂಡ್ ಮತ್ತು ಹೋಟೆಲ್​ಗಳಲ್ಲಿ ವಸತಿ ಕಲ್ಪಿಸಲಾಯಿತು. ಆಂಬುಲೆನ್ಸ್ ಕೊರತೆ ನೀಗಿಸಲು 800 ಎಸ್​ಯುುವಿಗಳನ್ನು ಆಂಬುಲೆನ್ಸ್​ಗಳನ್ನಾಗಿ ಪರಿವರ್ತಿಸಲಾಯಿತು. ಆಂಬುಲೆನ್ಸ್​ಗಳ ಜತೆ ಸಂವಹನಕ್ಕಾಗಿ ಉಬರ್ ಸಹಯೋಗದಲ್ಲಿ ಸಾಫ್ಟ್​ವೇರ್ ವೇದಿಕೆ ರಚಿಸಲಾಯಿತು. 172 ಆಸ್ಪತ್ರೆಗಳ ಮೂಲಕ ಚಿಕಿತ್ಸೆ ಮತ್ತು ಕೋವಿಡ್ ಸೋಂಕಿತರಿಗೆ ಆರೈಕೆಯನ್ನು ಕಲ್ಪಿಸಲಾಯಿತು. ಇಲ್ಲಿ ಮೂಲಸೌಕರ್ಯ ಕೊರತೆ ಆಗದಂತೆ ನಿಗಾ ವಹಿಸಲಾಯಿತು.

ಮುಂಬೈನಲ್ಲಿ ಮಾಡಿದ್ದೇನು?: ಕರೊನಾ ಕುರಿತ ಸಂವಹನಕ್ಕಾಗಿ ಕೇಂದ್ರೀಯ ವಾರ್ ರೂಮ್ ರದ್ದು ಮಾಡಿ ಪ್ರಕ್ರಿಯೆಯ ವಿಕೇಂದ್ರೀಕರಣಗೊಳಿಸಿ ವಾರ್ಡವಾರು ವಾರ್ ರೂಂ ಸ್ಥಾಪಿಸಲಾಯಿತು. ಪರೀಕ್ಷೆಯ ವರದಿಯನ್ನು ಇದರ ಮೂಲಕ ಜನರಿಗೆ ವೇಗವಾಗಿ ತಲುಪಿಸುವ ಕಾರ್ಯವನ್ನು ಮುಂಬೈ ಮಹಾನಗರ ಪಾಲಿಕೆ ಪರಿಣಾಮಕಾರಿಯಾಗಿ ಮಾಡಿತು. ಪಾಸಿಟಿವ್ ಇದ್ದವರು ಅನುಸರಿಬೇಕಾದ ಕ್ರಮಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಿ ಧೈರ್ಯ ತುಂಬಿ ಆತಂಕ ದೂರಮಾಡಿತು. 55 ಲ್ಯಾಬ್​ಗಳಿಂದ ದಿನಾ 10 ಸಾವಿರಕ್ಕೂ ಹೆಚ್ಚು ವರದಿಯನ್ನು ಪಡೆದುಕೊಂಡು ಅದನ್ನು ವಾರ್ಡ್​ವಾರು ವಿಂಗಡಿಸಿ ಆಯಾ ವಾರ್ ರೂಂಗಳಿಗೆ ರವಾನಿಸುವ ಕೆಲಸ ನಡೆಯಿತು. ಇದರಿಂದ ವಾರ್ ರೂಂಗಳ ಮೇಲಿನ ಕೆಲಸದ ಹೊರೆ ಇಳಿದು, ಅವು ಇನ್ನಿತರ ಸಮಸ್ಯೆಗಳ ಬಗ್ಗೆ ಹೆಚ್ಚು ನಿಗಾ ವಹಿಸಲು ಅನುಕೂಲವಾಯಿತು. ಪ್ರತಿ ವಾರ್ ರೂಂಗಳಲ್ಲೂ 30 ದೂರವಾಣಿ ಸಂಪರ್ಕ ಕಲ್ಪಿಸಿ, ಕರೆ ನಿರ್ವಹಿಸಲು 10 ಆಪರೇಟರ್​ಗಳನ್ನು ನೇಮಿಸಲಾಯಿತು. ಜತೆಗೆ ವಾರ್ ರೂಂಗಳಲ್ಲಿ ವೈದ್ಯರನ್ನು ಒಳಗೊಂಡ ವೈದ್ಯಕೀಯ ತಂಡ, 10 ಆಂಬುಲೆನ್ಸ್​ಗಳು, ಹಾಸಿಗೆಯ ಲಭ್ಯತೆ ಬಗ್ಗೆ 10 ಡ್ಯಾಷ್ ಬೋರ್ಡ್ ಮೂಲಕ ಮಾಹಿತಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net