

ರಾಮನಗರ : ಮೂರನೇ ಅಲೆ ಮಕ್ಕಳ ಪಾಲಿಗೆ ಹೆಚ್ಚು ಕಂಟಕ ಎನ್ನುವ ವರದಿಗಳು ಬೆಚ್ಚಿ ಬೀಳಿಸಿವೆಯಾದರೂ ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿಯೇ ಸಾವಿರಾರು ಮಕ್ಕಳು ಸೋಂಕಿತರಾಗಿರುವುದು ಮತ್ತಷ್ಟು ಆತಂಕ ಉಂಟುಮಾಡಿದೆ.
ಜಿಲ್ಲೆಯಲ್ಲಿ ದಿನ ಕಳೆದಂತೆ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದು, ಎರಡನೇ ಅಲೆಯಲ್ಲಿ 1723 ಮಕ್ಕಳಿಗೆ ಸೋಂಕು ತಗುಲಿ ಹಲವು ಮಂದಿ ಚೇತರಿಕೆ ಕಂಡಿದ್ದಾರೆ.
ಆದರೆ, 3ನೇ ಅಲೆಗೂ ಮುನ್ನವೇ ಹೆಚ್ಚಿನ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಸೋಂಕಿನ ತೀವ್ರತೆಯ ಬಗ್ಗೆ ಈಗಾಗಲೇ ಎಚ್ಚರವಹಿಸುವಂತೆ ಮಾಡಿದೆ.
ಸಾವಿರ ಇದ್ದು, ಇದರಲ್ಲಿ ಸೋಂಕಿತರಾದ ಮಕ್ಕಳ ಪೈಕಿ ಗಂಡು ಮಕ್ಕಳೇ ಹೆಚ್ಚಾಗಿದ್ದಾರೆ. 1723 ಮಕ್ಕಳಲ್ಲಿ 940 ಗಂಡು, 783 ಹೆಣ್ಣು ಮಕ್ಕಳಾಗಿದ್ದಾರೆ. ಇನ್ನು ಈವರೆಗೆ ಒಂದು ಮಗು, ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದರೆ, 161 ಮಕ್ಕಳು ಏಕ ಪಾಲಕರ ಪೋಷಣೆಯಲ್ಲಿಯೇ ಬೆಳೆಯುವಂತಹ ಸನ್ನಿವೇಶ ನಿರ್ಮಾಣಗೊಂಡಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕು ದೃಢಪಟ್ಟ ಮಕ್ಕಳಲ್ಲಿ ಸುಮಾರು ಶೇ.70 ಮಕ್ಕಳು ಗುಣಮುಖರಾಗಿದ್ದಾರೆ.
ಮಾಹಿತಿ ಸಂಗ್ರಹ: ಮತ್ತೊಂದೆಡೆ ಪಾಲಕರನ್ನು ಕಳೆದುಕೊಂಡ ಹಾಗೂ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರನ್ನು ಕಳೆದುಕೊಂಡ ಮಕ್ಕಳ ಸ್ಥಿತಿ-ಗತಿಯ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ. ಪ್ರತಿದಿನ ಕೋವಿಡ್ ವಾರ್ ರೂಂ ಹಾಗೂ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳ ಪಾಲಕರಿಗೆ ಕರೆ ಮಾಡಿ ಅವರ ಆರ್ಥಿಕ ಸ್ಥಿತಿ-ಗತಿ, ಮಕ್ಕಳ ಪೋಷಣೆಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಪೋಷಣೆಗೆ ಬೇಕಾದ ನೆರವು ನೀಡಲು ಪಟ್ಟಿ ತಯಾರಿಸಲಾಗುತ್ತಿದೆ.
ಪಾಲಕರೇ ಎಚ್ಚರ : ಬಹುತೇಕ ಮಕ್ಕಳಿಗೆ ಕರೊನಾ ಮಾಹಿತಿ ಇದ್ದರೂ ಅದರ ತೀವ್ರತೆಯ ಅರಿವು ಅವರಿಗೆ ಇಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಈಗಿನಿಂದಲೇ ಸುರಕ್ಷತೆ ಬಗ್ಗೆ ತಿಳಿವಳಿಕೆ ನೀಡುವ ಕೆಲಸವನ್ನು ಪಾಲಕರು ಮಾಡಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಕೆ ಬಗ್ಗೆ ಪದೇಪದೆ ಮಾಹಿತಿ ನೀಡುವ ಮೂಲಕ ಜಾಗ್ರತೆಯಿಂದ ಇರಲು ನೋಡಿಕೊಳ್ಳಬೇಕು. ಅಲ್ಲದೆ, ಮಕ್ಕಳಿಗೆ ಸೋಂಕಿನ ಲಕ್ಷಣಗಳು ಕಂಡು ಬಂದ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಅವರಿಂದ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು. ಉದಾಸೀನ ತೋರಿದರೆ ಮಕ್ಕಳ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಜಿಲ್ಲಾಡಳಿತದಿಂದ ಸಿದ್ಧತೆ : ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ ಎನ್ನುವ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇದಕ್ಕೆ ಬೇಕಾದ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಈಗಾಗಲೇ ಕೆಆರ್‌ಐಡಿಎಲ್ ವತಿಯಿಂದ ಎರಡು ಆಸ್ಪತ್ರೆಗಳ ಬಳಿ ಆಕ್ಸಿಜನ್ ಘಟಕ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೆ, ಮಕ್ಕಳಸ್ನೇಹಿ ಆಸ್ಪತ್ರೆ ವಾತಾವರಣವನ್ನೂ ನಿರ್ಮಿಸಲಾಗುತ್ತಿದೆ.
ಈ ಸಂಖ್ಯೆಗೆ ಕರೆ ಮಾಡಿ : ವೈದ್ಯಕೀಯ ಸಲಹೆ, ಪಾಲಕರನ್ನು ಕಳೆದುಕೊಂಡ ಹಾಗೂ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರನ್ನು ಕಳೆದುಕೊಂಡ 0-18 ವರ್ಷದೊಳಗಿನ ಮಕ್ಕಳ ಮಾಹಿತಿಯನ್ನು ಮಕ್ಕಳ ಸಹಾಯವಾಣಿ 1098, ಟೆಲಿ ಕೌನ್ಸೆಲಿಂಗ್ 14499, ಮಕ್ಕಳ ರಕ್ಷಣಾ ಘಟಕ 080-29655500ಗೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.