

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಹೊಸದಾಗಿ 8,793 ಕರೊನಾ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 6,20,630ಕ್ಕೆ ತಲುಪಿದೆ.
ಮತ್ತೊಂದೆಡೆ ಗುಣವಾಗಿರುವ 7,094 ಮಂದಿ ಶುಕ್ರವಾರ ಒಂದೇ ದಿನ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಇದುವರೆಗೆ ರಾಜ್ಯದಲ್ಲಿ ಒಟ್ಟು 4,99,506 ಮಂದಿ ಗುಣವಾಗಿ ಬಿಡುಗಡೆ ಆಗಿದ್ದಾರೆ. ಇನ್ನೊಂದು ದಿನದಲ್ಲಿ ಇದು ಐದು ಲಕ್ಷ ದಾಟಲಿದೆ.
ಬೇಸರದ ಸಂಗತಿ ಎಂದರೆ ಒಂದೇ ದಿನದಲ್ಲಿ 125 ಮಂದಿ ಕೋವಿಡ್ಗೆ ಬಲಿಯಾಗಿದ್ದು, ಕರೊನಾದಿಂದಾಗಿ ಸತ್ತವರ ಸಂಖ್ಯೆ ಒಟ್ಟು 9,119 ಆಗಿದೆ. ಅಲ್ಲದೆ ಪ್ರಸ್ತುತ ರಾಜ್ಯದಲ್ಲಿ 1,11,986 ಸಕ್ರಿಯ ಪ್ರಕರಣಗಳಿದ್ದು, 827 ಮಂದಿ ಗಂಭೀರ ಸ್ಥಿತಿಯಲ್ಲಿದ್ದು ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.