

ಬೆಂಗಳೂರು: ಜಗತ್ತಿನ ಎಲ್ಲೆಡೆಯಂತೆ ರಾಜ್ಯದಲ್ಲೂ ಕರೊನಾ ಹಾವಳಿ ಇಟ್ಟಿರುವುದೇನೋ ನಿಜ. ಆದರೆ ಕರೊನಾ ಬಂದ ತಕ್ಷಣ ಭಯ ಬೀಳಬೇಕಾಗಿಲ್ಲ. ಏಕೆಂದರೆ ಇದುವರೆಗೆ ಸೋಂಕಿಗೆ ಒಳಗಾದವರಲ್ಲಿ ಸತ್ತವರಿಗಿಂತ ಚೇತರಿಸಿಕೊಂಡು ಗುಣವಾದವರೇ ಅತ್ಯಧಿಕ. ಗುಣವಾದವರು ಹಾಗೂ ಮೃತಪಟ್ಟವರ ಪ್ರಮಾಣಕ್ಕೂ ಅಜಗಜಾಂತರವಿದೆ.
ಈ ಮಾಹಿತಿಯನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರೇ ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿ ಇಂದು ಹೊಸದಾಗಿ 1,630 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮತ್ತು ಗುಣಮುಖರ ಪೈಕಿ ಇವತ್ತೇ 1,333 ಜನ ಬಿಡುಗಡೆ ಹೊಂದಿದ್ದಾರೆ. ಇಂದು 1,22,454 ಟೆಸ್ಟ್ ನಡೆಸಲಾಗಿದ್ದು, ಅವುಗಳಲ್ಲಿ 1,02,480 (83.68%) RT-PCR ಟೆಸ್ಟ್ ಆಗಿವೆ. ಈವರೆಗೂ ರಾಜ್ಯದಲ್ಲಿ 8,41,432 ಜನ ಗುಣವಾಗಿದ್ದು, ಚೇತರಿಕೆ ದರ 95.82% ಮತ್ತು ಮರಣ ಪ್ರಮಾಣ 1.33% ರಷ್ಟಿದೆ ಎಂದು ಸಚಿವರು ತಿಳಿಸಿದ್ದಾರೆ.
ಅದಾಗ್ಯೂ ರಾಜ್ಯದಲ್ಲಿ 24,890 ಸಕ್ರಿಯ ಪ್ರಕರಣಗಳಿದ್ದು, ಆ ಪೈಕಿ ಗಂಭೀರ ರೋಗಲಕ್ಷಣಗಳಿಂದಾಗಿ 405 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಒಂದೇ ದಿನ ಕರೊನಾಗೆ 19 ಮಂದಿ ಬಲಿಯಾಗಿದ್ದು, ಇದುವರೆಗೂ ಕರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 11,714ಕ್ಕೆ ತಲುಪಿದೆ.