ಕರೊನಾ ಪೆಟ್ಟು ಸರ್ಕಾರಿ ವೆಚ್ಚ ಕಟ್ಟುನಿಟ್ಟು ರಾಜ್ಯದಲ್ಲೀಗ ಮಿತವ್ಯಯ ಮಂತ್ರ ಸುಗಮ ಆಡಳಿತಕ್ಕೆ ಹೊಸ ತಂತ್ರ

page 1 4
Published on

ಬೆಂಗಳೂರು: ಕರೊನಾ ಮಹಾಮಾರಿ ಇನ್ನೂ ನಿಯಂತ್ರಣಕ್ಕೆ ಸಿಗದ ಪರಿಣಾಮ ಹಳ್ಳ ಹಿಡಿದಿರುವ ಆರ್ಥಿಕತೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಅಂಕೆಯಲ್ಲಿಡುವ ಉದ್ದೇಶದಿಂದ ರಾಜ್ಯ ಸರ್ಕಾರವೀಗ ಮಿತವ್ಯಯ ಮಂತ್ರ ಜಪಿಸಲಾರಂಭಿಸಿದೆ. ಲಭ್ಯವಿರುವ ಅನುದಾನವನ್ನು ದುಂದುವೆಚ್ಚ ಮಾಡದೆ ಕಟ್ಟುನಿಟ್ಟು ವಹಿಸುವುದು ಸರ್ಕಾರದ ಆಶಯ.

ಕಳೆದ ಹಣಕಾಸು ವರ್ಷದ ನಷ್ಟ ಬದಿಗಿರಲಿ, ಕರೊನಾದಿಂದಾಗಿ ಈ ವರ್ಷದ ಆರ್ಥಿಕ ಪರಿಸ್ಥಿತಿಯೇ ಏನಾಗಬಹುದೆಂಬ ಅಂದಾಜು ಸಿಗುತ್ತಿಲ್ಲ. ಹಣಕಾಸು ವರ್ಷ ಆರಂಭದ ಏಪ್ರಿಲ್​ನಲ್ಲೇ ಲಾಕ್​ಡೌನ್ ಪರಿಣಾಮ ತೆರಿಗೆ ಸಂಗ್ರಹ ಸಾಕಷ್ಟು ಕಡಿಮೆಯಾಗಲಿದೆ. ಮೇನಲ್ಲೂ ವ್ಯಾಪಾರ-ವಹಿವಾಟು ಚೇತರಿಸಿಕೊಳ್ಳುವ ಲಕ್ಷಣ ಕಾಣುತ್ತಿಲ್ಲ. ಆದ್ದರಿಂದ ಮಿತವ್ಯಯ ಬಿಟ್ಟು ಸರ್ಕಾರಕ್ಕೆ ಬೇರೆ ಯಾವುದೇ ದಾರಿ ಕಾಣುತ್ತಿಲ್ಲ. ಹೀಗಾಗಿಯೇ ವೆಚ್ಚಗಳ ಮೇಲೆ ನಿರ್ಬಂಧ ಹಾಕಿಕೊಳ್ಳಲಾಗುತ್ತಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.

ನಿಗಮಗಳಿಗೆ ಸೂಚನೆ

ನಿಗಮ ಮತ್ತು ಮಂಡಳಿಗಳು ಬ್ಯಾಂಕ್ ಸಾಲಗಳಿಗೆ ಎಷ್ಟು ಬಡ್ಡಿ ಕಟ್ಟಬೇಕೆಂಬುದನ್ನು ಹದಿನೈದು ದಿನ ಮುಂಚೆಯೇ ತಿಳಿಸಬೇಕು, ನಿಗಮಗಳಲ್ಲಿ ಹಣಕಾಸು ಲಭ್ಯತೆ ಎಷ್ಟಿದೆ ಎಂಬ ಬಗ್ಗೆಯೂ ವಿವರ ನೀಡುವಂತೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಸುಸ್ತಿದಾರರಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂದು ಹೇಳಲಾಗಿದೆ.

ಮಾರ್ಚ್​ನಲ್ಲೇ ಆಗಿದೆ ನಷ್ಟ

ಪ್ರತಿ ತಿಂಗಳು ಸುಮಾರು 12 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಬೇಕು. ಆದರೆ ಮಾರ್ಚ್​ನಲ್ಲೇ ಕರೊನಾ ಕಾಟ ಆರಂಭವಾಗಿದ್ದರಿಂದ ಶೇ. 60 ತೆರಿಗೆಯಷ್ಟೇ ಸಂಗ್ರಹವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್​ನಲ್ಲಿ ಮಾರಾಟ ತೆರಿಗೆ 1300 ಕೋಟಿ ರೂ.ಗಳಷ್ಟು ಕಡಿಮೆಯಾಗಿರುವ ಅಂದಾಜಿದೆ. ಕೇಂದ್ರದಿಂದ ಇನ್ನೂ 6320 ಕೋಟಿ ರೂ. ಜಿಎಸ್​ಟಿ ಪಾಲು ಹಾಗೂ ಸುಮಾರು 8000 ಕೋಟಿ ರೂ.ಪರಿಹಾರ ಬಾಕಿ ಇದೆ. ಏಪ್ರಿಲ್​ನಲ್ಲಿ ಅಬಕಾರಿಯಿಂದ 1700 ಕೋಟಿ ರೂ., ಮೋಟಾರ್ ವಾಹನ ಹಾಗೂ ನೋಂದಣಿ ಸೇರಿ ಸುಮಾರು 1500ರಿಂದ 2000 ಕೋಟಿ ರೂ. ಗಳಷ್ಟು ಆದಾಯ ಖೋತಾ ಆಗಬಹುದೆಂದು ಹೇಳಲಾಗುತ್ತಿದೆ.

ಯಾವುದಕ್ಕೆ ವೆಚ್ಚ ಮಾಡಬೇಕು, ಮಾಡಬಾರದು, ಮಿತವ್ಯಯ ಹೇಗೆ ಸಾಧಿಸಬೇಕು ಎಂಬ ಬಗ್ಗೆ ಹಣಕಾಸು ಇಲಾಖೆ ಸ್ಪಷ್ಟ ನಿರ್ಧಾರ ತೆಗೆದುಕೊಂಡಿದೆ. ಈ ಸಂಬಂಧ ಎಲ್ಲ ಇಲಾಖೆಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸರ್ಕಾರದ ಸಂಪೂರ್ಣ ವೆಚ್ಚವನ್ನು ಕರೊನಾ ನಿಯಂತ್ರಣಕ್ಕೆ ಸೀಮಿತ ಗೊಳಿಸಬೇಕೆಂಬುದನ್ನು ಮತ್ತೊಮ್ಮೆ ಹೇಳಬೇಕಾಗಿಲ್ಲ. ಆದ್ದರಿಂದ ಆಡಳಿತ ಇಲಾಖೆಗಳು ಯಾವುದೇ ವೆಚ್ಚಕ್ಕೆ ಆದೇಶ ಹೊರಡಿಸುವ ಮುನ್ನ ಹಣಕಾಸು ಇಲಾಖೆ ಅನುಮತಿ ಪಡೆಯಲೇಬೇಕು.

ಯಾವುದಕ್ಕೆ ವೆಚ್ಚ?: ವೇತನ, ಪಿಂಚಣಿ, ಸಾಮಾಜಿಕ ಭದ್ರತಾ ಪಿಂಚಣಿ, ಆಹಾರ ಭದ್ರತೆ, ತುರ್ತು ಸೇವೆಗಳ ಇಲಾಖೆಗಳಲ್ಲಿ ಕನಿಷ್ಠ ಪ್ರಮಾಣದ ಆಡಳಿತ ವೆಚ್ಚಕ್ಕಷ್ಟೇ ಅನುದಾನ ಖರ್ಚು ಮಾಡಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ಸಂಬಳದಲ್ಲಿಯೂ ಸಹ ಮಾರ್ಚ್​ನದ್ದನ್ನು ಖರ್ಚು ಮಾಡಬಹುದೆಂದು ಹಣಕಾಸು ಇಲಾಖೆ ಹೇಳಿದೆ. ಏಪ್ರಿಲ್ ಸಂಬಳದ ಬಗ್ಗೆ ಮುಂದಿನ ಪರಿಸ್ಥಿತಿ ಅವಲೋಕಿಸಿ ಆರ್ಥಿಕ ಇಲಾಖೆ ತೀರ್ಮಾನ ಕೈಗೊಳ್ಳುವುದರಿಂದ ಈಗಲೇ ಯಾವ ಸ್ಪಷ್ಟತೆ ನೀಡಿಲ್ಲ. ಸಂಬಳ ಬಾಕಿ ಇದ್ದರೆ ಅದನ್ನು ಈಗ ನೀಡುವಂತಿಲ್ಲ. ಈ ವರ್ಷದ ಬಜೆಟ್​ಗೆ ಪೂರ್ಣ ಪ್ರಮಾಣದಲ್ಲಿ ಒಪ್ಪಿಗೆ ಸಿಕ್ಕಿರುವುದರಿಂದ ಹನ್ನೆರಡನೇ ಒಂದು ಭಾಗದಂತೆ ಖರ್ಚು ಮಾಡಬೇಕೆಂದು ತಿಳಿಸಿದೆ.

ಹೊಸ ಹುದ್ದೆ ಇಲ್ಲ: ಯಾವುದೇ ಹೊಸ ಹುದ್ದೆ ಸೃಜನೆಗೆ ಅವಕಾಶವಿಲ್ಲ. ಒಂದೊಮ್ಮೆ ಸೃಷ್ಟಿ ಮಾಡಿದರೆ ಅದಕ್ಕೆ ಆರ್ಥಿಕ ಇಲಾಖೆ ಅನುಮೋದನೆ ಕಡ್ಡಾಯ. ಇಲ್ಲದಿದ್ದರೆ ಅಂತಹ ಹುದ್ದೆಗಳಿಗೆ ಯಾವುದೇ ಕಾರಣಕ್ಕೂ ಒಪ್ಪಿಗೆ ಇಲ್ಲವೆಂದು ಸ್ಪಷ್ಟವಾಗಿ ಹೇಳಲಾಗಿದೆ.

ಅನುಮತಿ ಕಡ್ಡಾಯ: ಆಡಳಿತ ಇಲಾಖೆಗಳು ಅಭಿವೃದ್ಧಿ ಯೋಜನೆ ಕೈಗೊಳ್ಳುವ ಮುನ್ನ ಯೋಜನಾ ವರದಿಯನ್ನು ತಯಾರಿಸಿ ಹಣಕಾಸು ಇಲಾಖೆಗೆ ಸಲ್ಲಿಸಿ ಅನುಮತಿ ಪಡೆಯಲೇಬೇಕು. ಯಾವುದೇ ಕಾರಣಕ್ಕೂ ವರ್ಷದ ಕೊನೆಯಲ್ಲಿ ಅಧಿಕ ವೆಚ್ಚ ಆಗದಂತೆ ಇಲಾಖೆಗಳ ಮುಖ್ಯಸ್ಥರು ಈಗಿನಿಂದಲೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.

| ರುದ್ರಣ್ಣ ಹರ್ತಿಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net