ಕರೊನಾ ಅವಲಕ್ಷಣ!

VV vishleshane
Published on

| ಶ್ರೀಕಾಂತ ಭಟ್ ಬೆಂಗಳೂರು

ರಾಜ್ಯದಲ್ಲಿ ಕರೊನಾ ಲಕ್ಷಣವೇ ಕಾಣಿಸದ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಕೊಂಚ ಮಟ್ಟಿಗೆ ಗಾಬರಿ ಹುಟ್ಟಿಸಿದೆ. ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಭಾನುವಾರಕ್ಕೆ ಸೀಮಿತವಾಗಿ 1391 ಸಕ್ರಿಯ ಪ್ರಕರಣವಿದ್ದರೆ ಅದರಲ್ಲಿ ಶೇ.95 ಮಂದಿಗೆ ಕರೊನಾ ಪಾಸಿಟಿವ್ ಇದೆ ಎಂಬ ವರದಿ ಬರುವವರೆಗೂ ಅವರಲ್ಲಿ ಯಾವುದೇ ಸೋಂಕಿನ ಲಕ್ಷಣ ಕಾಣಿಸಿರಲಿಲ್ಲ ಎಂಬುದು ಅಚ್ಚರಿ.

ತಿಂಗಳ ಹಿಂದೆ ಪ್ರತಿನಿತ್ಯ ರಾಜ್ಯದಲ್ಲಿ 500-600ಕ್ಕೆ ಸೀಮಿತವಾಗಿ ಟೆಸ್ಟಿಂಗ್ ನಡೆಯುತ್ತಿದ್ದಾಗ ಒಟ್ಟು ಸೋಂಕಿತರ ಪೈಕಿ ಸೋಂಕು ಕಾಣಿಸದವರ ಪ್ರಮಾಣ ಶೇ.70-72 ಇತ್ತು. ಇದೀಗ ಕ್ರಿಯಾಶೀಲವಾಗಿರುವ ಪ್ರಕರಣದಲ್ಲಿ ಈ ಪ್ರಮಾಣ ಶೇ.95ಕ್ಕಿಂತ ಹೆಚ್ಚಾಗಿದೆ. ಈ ಬೆಳವಣಿಗೆಯನ್ನು ಸರ್ಕಾರ ಎರಡು ಆಯಾಮದಲ್ಲಿ ಅವಲೋಕಿಸುತ್ತಿದೆ. ಒಂದು ರೀತಿಯಲ್ಲಿ ಒಳ್ಳೆಯ ಬೆಳವಣಿಗೆಯಾಗಿ ಕಂಡರೆ ಮತ್ತೊಂದೆಡೆ ಅಳುಕೂ ಇದೆ. ಈ ಬೆಳವಣಿಗೆ ಜತೆಯಲ್ಲೇ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಮತ್ತು ಯಾರ ಸಂಪರ್ಕದಿಂದಲೂ ಸೋಂಕು ಅಂಟಿಸಿಕೊಂಡರೆಂದು ತಿಳಿಯದ 15ಕ್ಕೂ ಹೆಚ್ಚು ಮಂದಿ ಪತ್ತೆಯಾಗಿದ್ದು, ಇವರ ಮೂಲ ಹುಡುಕಲು ಜಿಲ್ಲಾಡಳಿತಗಳು ಪರದಾಡುತ್ತಿವೆ.

ಅಪಾಯವೇನು?: ರೋಗ ನಿರೋಧಕ ಶಕ್ತಿ ತಗ್ಗಿ ಅಪಾಯಕ್ಕೆ ಸಿಲುಕುವ ಮುನ್ನವೇ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟರೆ ಚಿಕಿತ್ಸೆ ಆರಂಭಿಸಿ ಶೀಘ್ರವಾಗಿ ಮತ್ತು ಸುಲಭವಾಗಿ ರಕ್ಷಿಸಲು ಸಾಧ್ಯವಿದೆ ಎಂಬುದು ಸಕಾರಾತ್ಮಕ ವಿಚಾರ. ಇದೇ ವೇಳೆ ಸೋಂಕು ಕಾಣಿಸಿಕೊಳ್ಳದೇ ಇದ್ದರೆ ಅಪಾಯವೂ ಹೆಚ್ಚೆಂಬ ಅಭಿಪ್ರಾಯವಿದೆ. ಕಂಟೇನ್ಮೆಂಟ್ ಪ್ರದೇಶ, ವಿದೇಶ ಅಥವಾ ಹೊರ ರಾಜ್ಯದಿಂದ ಆಗಮಿಸಿ ಕ್ವಾರಂಟೈನ್​ನಲ್ಲಿರುವವರು ಅಥವಾ ಸಾಮಾನ್ಯ ಓಡಾಟ ನಡೆಸಿ ಮನೆಯಲ್ಲಿ ಇರುವವರಾದರೂ ಸರಿ ಸೋಂಕಿನ ಲಕ್ಷಣ ಕಾಣಿಸಿಕೊಳ್ಳದೆ ಸೋಂಕಿತರಾಗಿದ್ದುಕೊಂಡು ಗೊತ್ತೋ ಗೊತ್ತಿಲ್ಲದೋ ಇತರರ ಸಂಪರ್ಕ ಮಾಡಿದರೆ ಈ ಸರಪಳಿ ಮತ್ತಷ್ಟು ಬೆಳೆಯುವ ಸಾಧ್ಯತೆಯಿದೆ.

ಬೇರೆ ಬೇರೆ ದೇಶಗಳಲ್ಲಿ ಇಂಥದ್ದೇ ಬೆಳವಣಿಗೆ ನಡೆದಿದ್ದರಿಂದಾಗಿ ಸೋಂಕಿತರ ಸರಪಳಿ ಕಡಿಯಲು ಸಾಧ್ಯವಾಗುತ್ತಿಲ್ಲ. ಕರೊನಾ ವಾರಿಯರ್​ಗಳಿಗೂ ಇದು ಆತಂಕ ತರುವ ವಿಚಾರ. ಪೊಲೀಸರು, ಆರೋಗ್ಯ ಕಾರ್ಯಕರ್ತರು, ವೈದ್ಯರು ಪ್ರಮುಖವಾಗಿ ಈ ವರ್ಗದವರಿಂದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ. ಕೇವಲ ಕ್ವಾರಂಟೈನ್​ನಲ್ಲಿದ್ದಾರೆ ಅಥವಾ ಕಂಟೇನ್ಮೆಂಟ್ ವ್ಯಾಪ್ತಿಯಲ್ಲಿದ್ದಾರೆಂಬ ಉದಾಸೀನ ತೋರಿ ಸಂಪರ್ಕಕ್ಕೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ರಾಜ್ಯದಲ್ಲಿ ಒಂದಿಷ್ಟು ಉದಾಹರಣೆ ಸಹ ಸಿಕ್ಕಿದೆ.

ಟೆಸ್ಟ್ ಹೆಚ್ಚಳ ಕಾರಣ

ವಿದೇಶ, ಹೊರ ರಾಜ್ಯದಿಂದ ಬಂದವರನ್ನು 2 ಬಾರಿ ಟೆಸ್ಟ್​ಗೆ ಒಳಪಡಿಸಿದ್ದರಿಂದ, ಕಂಟೇನ್ಮೆಂಟ್ ಪ್ರದೇಶದಲ್ಲಿ ರ್ಯಾಂಡಮ್ ಟೆಸ್ಟ್ ಮಾಡಿದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ದೆಹಲಿ ಧರ್ಮಸಭೆಯಿಂದ ಬಂದವರು ನಂತರ ಮಹಾರಾಷ್ಟ್ರದಿಂದ ಆಗಮಿಸಿದವರು, ಕಲಬುರಗಿ ಮತ್ತು ಬೆಂಗಳೂರಿನ ಪಾದರಾಯನಪುರ ಕಂಟೇನ್ಮೆಂಟ್ ಪ್ರದೇಶದಲ್ಲಿ ಈ ವರ್ಗಕ್ಕೆ ಸೇರಿದವರು ಪತ್ತೆಯಾಗಿದ್ದಾರೆ. ಕಂಟೇನ್ಮೆಂಟ್ ಪ್ರದೇಶವಾಗಿಸುವ ವಿಚಾರದಲ್ಲಿ ಸ್ಥಳೀಯ ಆಡಳಿತಗಳು ತೋರಿದ ಮುನ್ನೆಚ್ಚರಿಕೆ ಕ್ರಮದಿಂದ ವ್ಯಾಪಕವಾಗಿ ಹಬ್ಬುತ್ತಿದ್ದ ಕಡೆಗಳಲ್ಲಿ ಸೋಂಕು ತಕ್ಕಮಟ್ಟಿಗೆ ಸೀಮಿತಗೊಂಡಿದೆ ಅಥವಾ ಇನ್ನೂ ಮಂದಗತಿಯಲ್ಲೇ ಇದೆ ಎನ್ನಬಹುದು.

ಲಕ್ಷಣಗಳು ಇವು: ತಲೆನೋವು, ಕೆಮ್ಮು, ಗಂಟಲು ನೋವು, ಜ್ವರ, ಸಂಪೂರ್ಣ ಅನಾರೋಗ್ಯ ಕರೊನಾದ ಪ್ರಮುಖ ಲಕ್ಷಣಗಳು

ಹದಿನೈದು ದಿನದಲ್ಲಿ ವ್ಯಾಪಕತೆ ತೀವ್ರ

ಕಳೆದ 15 ದಿನಗಳಲ್ಲಿ ಕಂಡುಬಂದ ಪ್ರಕರಣ 1294. ಅಂದರೆ ಮೇ 9ರ ವರೆಗೆ ರಾಜ್ಯದಲ್ಲಿದ್ದಿದ್ದು ಕೇವಲ 795 ಪ್ರಕರಣ. ಬಳಿಕ ಸೋಂಕಿತರ ಗ್ರಾಫ್ ಗಣನೀಯವಾಗಿ ಏರಿಕೆ ಕಂಡಿದೆ. ಈ ಸಂಖ್ಯೆ ಹೆಚ್ಚಾಗಲು ಅಹ್ಮದಾಬಾದ್, ಅಜ್ಮೀರ್, ದೆಹಲಿ, ತಮಿಳುನಾಡು ಜತೆಗೆ ಮಹಾರಾಷ್ಟ್ರದಿಂದ ಬಂದವರ ಕೊಡುಗೆ ದೊಡ್ಡದು. ಹೊರ ರಾಜ್ಯದಿಂದ ಕಳೆದ 15 ದಿನಗಳಲ್ಲಿ ಆಗಮಿಸಿ ಸೋಂಕು ಕಾಣಿಸಿಕೊಂಡವರ ಸಂಖ್ಯೆ 1038. ಅಂದರೆ ಈ ಅವಧಿಯಲ್ಲಿ ದ್ವಿತೀಯ ಸಂಪರ್ಕ ಹಾಗೂ ಕಂಟೇನ್ಮೆಂಟ್​ನಲ್ಲಿ ಸೋಂಕು ಕಾಣಿಸಿಕೊಂಡವರ ಸಂಖ್ಯೆ 256. ಇವರಲ್ಲೂ 15ಕ್ಕಿಂತ ಹೆಚ್ಚು ಮಂದಿಯ ಟ್ರಾವೆಲ್ ಹಿಸ್ಟರಿ ಇಲ್ಲ, ಅವರಿಗೆ ಸೋಂಕು ತಗುಲಿದ ಮೂಲ ಪತ್ತೆಯಾಗಿಲ್ಲ.

ಏನು ಮಾಡಬೇಕು?

ಸೋಂಕಿನ ಲಕ್ಷಣಗಳು ಕಂಡುಬಂದ ತಕ್ಷಣ ನಿಗದಿತ ಜ್ವರ ತಪಾಸಣಾ ಕೇಂದ್ರಕ್ಕೆ ಹೋಗಿ ಪರೀಕ್ಷಿಸಿಕೊಂಡರೆ ಗೊಂದಲ ನಿವಾರಣೆಯಾಗುವ ಜತೆಗೆ ಅಪಾಯದಿಂದಲೂ ಪಾರಾಗಬಹುದು

ತಪ್ಪು ಹೆಜ್ಜೆ ಬೇಡ

ಕೆಲವರು ಜ್ವರ, ಕೆಮ್ಮು, ಗಂಟಲು ನೋವು ಬಂದಾಗ ಸ್ವಯಂ ಔಷಧಕ್ಕೆ ಮೊರೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಅದು ಅಪಾಯಕಾರಿ ಬೆಳವಣಿಗೆ. ಒಮ್ಮೆ ಪರೀಕ್ಷಿಸಿಕೊಂಡರೆ ತಮ್ಮ ಜತೆಗೆ ಇತರರನ್ನೂ ರಕ್ಷಿಸಲು ಸಾಧ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net