

ರಾಮನಗರ: ಜಿಲ್ಲೆಯಲ್ಲಿ ಕರೊನಾ ಸೋಂಕು ದಿನದಿಂದ ದಿನಕ್ಕೆ ಇಳಿಕೆ ಆಗುತ್ತಿದೆ. ಆದರೆ, ಇದರ ನಡುವೆ ಒಮಿಕ್ರಾನ್ ಭೂತ ರಾಜ್ಯ ಹೊಕ್ಕಿದ್ದು, ಜಿಲ್ಲೆಯಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕಿದೆ.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನಸಾಮಾನ್ಯರು ಎಂದಿನಂತೆ ನಿಯಮಗಳನ್ನು ಪಾಲಿಸದೆ ಓಡಾಡುತ್ತಿದ್ದು, ಮಾಸ್ಕ್ ಇಲ್ಲದಿದ್ದರೆ ದಂಡ ವಿಧಿಸುವ ಪ್ರಕ್ರಿಯೆ ಬೆಂಗಳೂರು ಹೊರತುಪಡಿಸಿ ಜಿಲ್ಲೆಯ ಮಟ್ಟಕ್ಕೆ ನಿಂತೇ ಹೋಗಿದೆ.
ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎನ್ನುವ ನಿಯಮವನ್ನು ಜನ ಮರೆತಿದ್ದಾರೆ. ಇತ್ತ ರೋಗ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಇಲಾಖೆಗಳು ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿವೆ. ರಾಮನಗರ ಜಿಲ್ಲೆಯ ಗಡಿ ಪ್ರದೇಶ ಬಿಡುತ್ತಿದ್ದಂತೆ ಬೆಂಗಳೂರಿನಲ್ಲಿ ಮಾಸ್ಕ್ ಧರಿಸದೆ ವಾಹನಗಳಲ್ಲಿ ಓಡಾಟ ಮಾಡಿದ್ದು ಕಂಡು ಬಂದರೆ 250 ರೂ. ದಂಡ ವಿಧಿಸಲಾಗುತ್ತಿದೆ.
ಈ ಬಗ್ಗೆ ಮಾಹಿತಿ ಇದ್ದರೂ ರಾಮನಗರ ಸೇರಿ ಇತರ ತಾಲೂಕುಗಳಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಪೊಲೀಸರಾಗಲಿ, ಸ್ಥಳೀಯ ಸಂಸ್ಥೆಗಳಾಗಲಿ ದಂಡ ಪ್ರಯೋಗಕ್ಕೂ ಮುಂದಾಗಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾದ ಸ್ಥಿತಿ ನಿರ್ಮಾಣವಾದರೆ ಆಶ್ಚರ್ಯಪಡಬೇಕಿಲ್ಲ.
5.95 ಲಕ್ಷ ಮಂದಿಗೆ ಪರೀಕ್ಷೆ:
ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕು ಇಳಿದಿದೆಯಾದರೂ ಒಮಿಕ್ರಾನ್ ಪ್ರಕರಣ ಪತ್ತೆ ಆಗದಿರುವುದು ನೆಮ್ಮದಿಯ ವಿಚಾರ. ಜಿಲ್ಲೆಯಲ್ಲಿ ಪ್ರಸ್ತುತ ಮಾಗಡಿಯಲ್ಲಿ 4 ಮತ್ತು ಚನ್ನಪಟ್ಟಣದಲ್ಲಿ ಒಂದು ಕರೊನಾ ಪಾಸಿಟಿವ್ ಪ್ರಕರಣ ಹೊರತುಪಡಿಸಿ ಉಳಿದಂತೆ ಎಲ್ಲವೂ ಶೂನ್ಯವಾಗಿದೆ. ಕರೊನಾ ಆರಂಭಗೊಂಡ ದಿನದಿಂದ ಡಿ.21ರವರೆಗೆ ಜಿಲ್ಲೆಯಲ್ಲಿ ಒಟ್ಟು 24712 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿದ್ದು, 24342 ಮಂದಿ ಚೇತರಿಸಿಕೊಂಡಿದ್ದಾರೆ, ಹಾಗೂ 365 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 5.95 ಲಕ್ಷ ಮಂದಿ ಕರೊನಾ ಪರೀಕ್ಷೆ ಒಳಗಾಗಿದ್ದಾರೆ. ಆದರೂ, ಒಮಿಕ್ರಾನ್ ಆರ್ಭಟ ಆರಂಭಗೊಳ್ಳುವ ಮುನ್ನ ಜನತೆ ಎಚ್ಚೆತ್ತುಕೊಳ್ಳಬೇಕಿದೆ.
ಸಾರ್ವಜನಿಕರು ಪರಿಣಾಮದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಇದರ ಹೊರತಾಗಿಯೂ ಮುಂದೆ ಎದುರಾಗಬಹುದಾದ ಸಮಸ್ಯೆ ನಿಭಾಯಿಸುವ ಜವಾಬ್ದಾರಿ ಜಿಲ್ಲಾಡಳಿತದ ಮೇಲೆ ಇರುವ ಕಾರಣ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳು ಜನರಿಗೆ ಕರೊನಾ ನೀತಿಸಂಹಿತೆ ಬಗ್ಗೆ ಅರಿವು ಮೂಡಿಸುವ ಕೆಲಸ ಆರಂಭಿಸಬೇಕಿದೆ. ಮಾರುಕಟ್ಟೆ ಸೇರಿ ಹೆಚ್ಚಿನ ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೆ, ಪರಸ್ಪರ ಅಂತರ ಕಾಯ್ದ್ದುಕೊಳ್ಳದವರ ವಿರುದ್ಧ ಕ್ರಮ ಜರುಗಿಸಿ ದಂಡ ವಿಧಿಸುವ ಕೆಲಸ ಮಾಡಿದರೆ ರೋಗ ನಿಯಂತ್ರಣ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಕ್ರಮವಹಿಸಬೇಕಿದೆ.
ಮಾರ್ಗಸೂಚಿ ಮರೆಯದಿರಿ: ಒಮಿಕ್ರಾನ್ ರಾಜ್ಯಕ್ಕೆ ಲಗ್ಗೆ ಇಟ್ಟಿದೆ. ದೇಶದ ಮೊದಲ ಪ್ರಕರಣ ಪತ್ತೆ ಆಗಿದ್ದು ಬೆಂಗಳೂರಿನಲ್ಲಿಯೇ ಎನ್ನುವುದು ಮತ್ತಷ್ಟು ಆತಂಕಕಾರಿ ವಿಚಾರ. ಅಲ್ಲದೆ, ಒಮಿಕ್ರಾನ್ ಸಮುದಾಯಕ್ಕೆ ಹರಡಿದೆ ಎನ್ನುವ ಭೀತಿಯೂ ಇರುವುದರಿಂದಾಗಿ ಸಾರ್ವಜನಿಕರು ಎಚ್ಚೆತ್ತು ವರ್ತಿಸಬೇಕಿದೆ. ಮಾರುಕಟ್ಟೆ ಸೇರಿ ಜನದಟ್ಟಣೆ ಪ್ರದೇಶಕ್ಕೆ ಹೋಗುವಾಗ ಮತ್ತು ಮನೆಯಿಂದ ಹೊರಗೆ ಬರುವಾಗ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಸೇರಿ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು.