ಕರೊನಾ ನಿರ್ವಹಣೆ ಸಹಿಸದ ಕಾಂಗ್ರೆಸ್: ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜು ಕಿಡಿ ರಾಜಕೀಯ ದುರ್ಬಳಕೆಗೆ ವಿಷಾದ

19-05-rama-BJP
Published on

ರಾಮನಗರ :  ಕರೊನಾ ಸಂದರ್ಭದಲ್ಲಿ ಸರ್ಕಾರಕ್ಕೆ ರಚನಾತ್ಮಕ ಸಲಹೆಗಳನ್ನು ನೀಡಬೇಕಾದ ವಿರೋಧ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಕೆ ಮಾಡಿಕೊಳ್ಳಲು ಮುಂದಾಗುತ್ತಿರುವುದ ವಿಷಾಧಕರ ಸಂಗತಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಶಸ್ವಿಯಾಗಿ ಕೋವಿಡ್ ನಿರ್ವಹಣೆ ಮಾಡುತ್ತಿದ್ದು, ಇದನ್ನು ಸಹಿಸಲಾಗದ ಪ್ರತಿಪಕ್ಷ ಕಾಂಗ್ರೆಸ್ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ರಾಜಕೀಯ ಮಾಡಲು

ಹೊರಟಿದೆ ಎಂದು ಕಿಡಿಕಾರಿದರು.

ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಇಂದು ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಕಡಿಮೆ ಆಗುತ್ತಿದೆ. ಲಾಕ್‌ಡೌನ್‌ಗೂ ಮುನ್ನಾ 50 ಸಾವಿರದಷ್ಟಿದ್ದ ಸೋಂಕಿನ ಪ್ರಮಾಣದ ಈಗ 40 ಸಾವಿರಕ್ಕೆ ಇಳಿದಿದೆ. ಬೆಂಗಳೂರಿನಲ್ಲೂ ದೈನಂದಿನ ಸೋಂಕಿತರ ಪ್ರಮಾಣ ಕಡಿಮೆ ಆಗಿದೆ. ಸೋಂಕು ಉಲ್ಬಣಗೊಳ್ಳುವ ಮುನ್ನಾ ರಾಜ್ಯದಲ್ಲಿ 1970 ಆಕ್ಸಿಜನೇಟೆಡ್ ಬೆಡ್‌ಗಳು, 444 ಐಸಿಯೂ ಹಾಗೂ 610 ವೆಂಟಿಲೇಟರ್ ಸಹಿತ ಐಸಿಯುಗಳಿದ್ದವು. ಆದರೆ ಈಗ ಇಲಾಖೆ ವ್ಯಾಪ್ತಿಯಲ್ಲಿ 24 ಸಾವಿರ ಆಕ್ಸಿಜನೇಟೆಡ್ ಬೆಡ್‌ಗಳು, 1145 ಐಸಿಯು ಬೆಡ್‌ಗಳು, 2059 ವೆಂಟಿಲೇಟರ್ ಬೆಡ್‌ಗಳು ಹಾಗೂ 1248 ಎಚ್‌ಎಫ್‌ಎನ್ ಸೌಲಭ್ಯಗಳು ಇವೆ. ಅಂತೆಯೇ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಆಕ್ಸಿಜನೇಟೆಡ್ ಬೆಡ್‌ಗಳ ಸಂಖ್ಯೆಯಲ್ಲೂ ದಿ ್ವಗುಣಗೊಂಡು 4700ರಿಂದ 9405ಕ್ಕೆ ಹೆಚ್ಚಿಸಲಾಗಿದೆ. ವೆಂಟಿಲೇಟರ್‌ಗಳ ಸಂಖ್ಯೆ 341 ರಿಂದ 646ಕ್ಕೆ, ಎಚ್‌ಎಫ್‌ಎನ್‌ಗಳ ಸಂಖ್ಯೆ 15ರಿಂದ 570ಕ್ಕೆ ಹೆಚ್ಚಿಸಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಆಕ್ಸಿಜನ್ ಕೊರತೆ ನೀಗಿಸಲು, ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಶೇ.70ರ ಸಹಾಯಧನವನ್ನು ನೀಡುತ್ತಿದ್ದು, ಉಳಿದ ಶೇ.30ರ ಮೊತ್ತವನ್ನು ಆಯಾ ಆಸ್ಪತ್ರೆಗಳು ಭರಿಸಬೇಕು. ಈ ಮೂಲಕ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಕೊರೆತೆಯನ್ನು ನೀಗಿಸಲಾಗುತ್ತಿದೆ.

ಲಸಿಕೆ ಹಾಕುವ ಸಂಬಂಧ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, 18-44 ವರ್ಷದೊಳಗಿನವರಿಗೆ ಲಸಿಕೆ ನೀಡಲು 3 ಕೋಟಿ ಡೋಸ್ ಲಸಿಕೆ ಖರೀದಿಗೆ ಆದೇಶ ನೀಡಿದೆ. ಇದರಲ್ಲಿ 2 ಕೋಟಿ ಕೋವಿ ಶೀಲ್ಡ್ ಹಾಗೂ ಒಂದು ಕೋಟಿ ಕೊವ್ಯಾಕ್ಸಿನ್ ಸೇರಿದೆ.

ಹೆಚ್ಚುವರಿ 2 ಕೋಟಿ ಡೋಸ್ ಇಂಜೆಕ್ಷನ್ ಸರಬರಾಜು ಮಾಡಲು ಜಾಗತಿಕ ಟೆಂಡರ್ ಕರೆಯಲಾಗಿದೆ. ಈವರೆಗೆ 7.5 ಲಕ್ಷ ಕೋವಿಶೀಲ್ಡ್ ಹಾಗೂ 1.44 ಲಕ್ಷ ಕೊವ್ಯಾಕ್ಸಿನ್ ಸೇರಿದಂತೆ 8.94 ಲಕ್ಷ ಡೋಸ್‌ಗಳು ಲಭ್ಯವಾಗಿವೆ. ಕೋವಿ ಶೀಲ್ಡ್ ಲಸಿಕೆ ಪಡೆದ 14.87 ಲಕ್ಷ ಫಲಾನುಭವಿಗಳಿಗೆ ಆರು ವಾರ ಪೂರೈಸಿದ್ದು, ಎರಡನೇ ಡೋಸ್‌ಗೆ ಅರ್ಹತೆ ಹೊಂದಿದ್ದಾರೆ. ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದ 5.10 ಲಕ್ಷ ಫಲಾನುಭವಿಗಳು 4 ವಾರ ಪೂರೈಸಿದ್ದು, ಎರಡನೇ ಡೋಸ್ ಪಡೆಯಲು ಅರ್ಹತೆ ಹೊಂದಿದ್ದಾರೆ. ಲಸಿಕೆ ಪೂರೈಕೆ ಮಾಡದ ಕಂಪನಿಗಳಿಗೆ ನೋಟಿಸ್ ಸಹ ನೀಡಿದೆ.

ಇಷ್ಟೆಲ್ಲಾ ಕಾರ್ಯಕ್ರಮಗಳ ಜತೆಗೆ ಪಕ್ಷವೂ ನನ್ನ ಬೂತ್ - ಕರೊನಾ ಮುಕ್ತ ಬೂತ್ ಎನ್ನುವ ಕಾರ್ಯಕ್ರಮದಡಿ 250 ಸಹಾಯವಾಣಿ ಕೇಂದ್ರಗಳನ್ನು ತೆರೆದಿದ್ದು, 2.5 ಲಕ್ಷ ಮಾಸ್ಕ್ ವಿತರಣೆ, ಶಿಬಿರಗಳ ಮೂಲಕ ರಕ್ತ ಸಂಗ್ರಹದಂತಹ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ದೇವರಾಜು ತಿಳಿಸಿದರು. ಈ ವೇಳೆ ಪಕ್ಷದ ಮುಖಂಡರಾದ ಚಂದ್ರಶೇಖರ್ ರೆಡ್ಡಿ, ರುದ್ರದೇವರು ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net