Saif Ali Khan ಮೇಲೆ ದಾಳಿ ಮಾಡಿದವ ಬಾಂಗ್ಲಾ ಪ್ರಜೆ, ದಿನಕ್ಕೊಂದು ಹೆಸರು... ತನಿಖೆಯಲ್ಲಿ ಬೆಳಕಿಗೆ ಬಂತು ಸ್ಫೋಟಕ ಅಂಶ

Saif Ali Khan
Published on

ಮುಂಬೈ: ನಟ ಸೈಫ್​ ಅಲಿ ಖಾನ್​ (Saif Ali Khan) ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಥಾಣೆಯಲ್ಲಿ ಬಂದಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸುತ್ತಿದ್ದಂತೆ ಹೊಸ ವಿಚಾರಗಳು ಹೊರಬರುತ್ತಿದ್ದು, ನಟನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿ ಬಾಂಗ್ಲಾದೇಶದ ಪ್ರಜೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ನಟ ಸೈಫ್​ ಅಲಿ ಖಾನ್​ (Saif Ali Khan) ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ಮುಂಬೈ ಪೊಲೀಸರು 20ಕ್ಕೂ ಹೆಚ್ಚು ತಂಡಗಳನ್ನು ರಚಿಸಿದ್ದರು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ತನಿಖೆ ವೇಳೆ ಹೊರಬಂದ ಸತ್ಯಾಂಶವನ್ನು ಮಾಧ್ಯಮಗಳ ಮುಂದಿಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ಮುಂಬೈ ಡಿಸಿಪಿ ದೀಕ್ಷಿತ್ ಗೆಡಮ್, ನಟ ಸೈಪ್​ ಅಲಿ ಖಾನ್​ ಅವರ ಮೇಲಿನ ಮಾರಣಾಂತಿಕ ಹಲ್ಲೆ ಹಾಗೂ ಅವರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಹೆಸರು ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ ಎಂದು ತಿಳಿದು ಬಂದಿದ್ದು, ಈತ ಬಾಂಗ್ಲಾದೇಶದ ಪ್ರಜೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಕಳೆದ ಐದು ತಿಂಗಳ ಹಿಂದೆ ಈತ ಬಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದ. ಈತನ ಬಳಿ ಭಾರತದ ನಾಗರೀಕ ಎಂದು ಹೇಳಿಕೊಳ್ಳಲು ಯಾವುದೇ ಆಧಾರವಿಲ್ಲ. ಈತನ ವಿರುದ್ಧ ಪಾಸ್​ಪೋರ್ಟ್​ ಆ್ಯಕ್ಟ್​ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನ ಬಳಿ ಇದ್ದ ವಸ್ತುಗಳನ್ನು ನಾವು ವಶಕ್ಕೆ ಪಡೆದಿದ್ದು, ಆತ ಬಾಂಗ್ಲಾದೇಶದ ಪ್ರಜೆ ಎಂಬುದು ನಿರೂಪಿತವಾಗಿದೆ. ಭಾರತಕ್ಕೆ ಬಂದ ಬಳಿಕ ಆತ ಬಿಜೋಯ್ ದಾಸ್ ಎಂದು ಬದಲಿಸಿಕೊಂಡು ಮುಂಬೈನಲ್ಲಿದ್ದ ಹೌಸ್​ಕೀಪಿಂಗ್​ ಕಂಪನಿ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. 

ಘಟನೆ ನಡೆದ ದಿನ ರಾತ್ರಿ ಆತ ನಟನ ಮೆನೆಗೆ ದರೋಡೆ ಮಾಡಲು ಯತ್ನಿಸಿದ್ದು, ಮೊದಲಿಗೆ ಹಣ ಕೇಳಿದ್ದಾನೆ. ಇದಕ್ಕೊಪ್ಪದಿದ್ದಾಗ ಮನೆಕೆಲಸದಾಕೆ ಜುನು ಹಾಗೂ ಸೈಫ್​ ಅಲಿ ಖಾನ್​ (Saif Ali Khan) ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಸಿಸಿಟಿವಿ ಹಾಗೂ ತಾಂತ್ರಿಕ ಸಾಕ್ಷ್ಯಾಧಾರದ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮುಂಬೈ ಡಿಸಿಪಿ ದೀಕ್ಷಿತ್ ಗೆಡಮ್ ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net