

ಪಟಿಯಾಲಾ: ಪಂಜಾಬ್ನ ಪಟಿಯಾಲಾದ ಸಾನುರ್ ತರಕಾರಿ ಮಾರ್ಕೆಟ್ನಲ್ಲಿ ನಿಹಾಂಗ್ಸ್ ಗುಂಪೊಂದು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ.
ಲಾಕ್ಡೌನ್ ನಿಯಮ ಉಲ್ಲಂಘಿಸಿ ತರಕಾರಿ ಮಾರುಕಟ್ಟೆಯಲ್ಲಿ ಗುಂಪುಗೂಡಿದ್ದರು. ಪೊಲೀಸರು ಅವರ ಬಳಿ ಹೋಗಿ ಕರ್ಫ್ಯೂ ಪಾಸ್ ತೋರಿಸುವಂತೆ ಕೇಳಿದ್ದಾರೆ. ಆದರೆ ಈ ಗುಂಪು ಪಾಸ್ ತೋರಿಸದೆ, ಐರನ್ ರಾಡ್, ಕತ್ತಿಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ತಮ್ಮ ವಾಹನಗಳಿಂದ ಬ್ಯಾರಿಕೇಡ್ಗಳಿಗೆ ಮತ್ತು ಮಾರ್ಕೆಟ್ನ ಗೇಟ್ಗಳಿಗೆ ಡಿಕ್ಕಿ ಮಾಡಿ ನುಜ್ಜುಗುಜ್ಜು ಮಾಡಿದ್ದಾರೆ ಎಂದು ಪಟಿಯಾಲಾ ಎಸ್ಎಸ್ಪಿ ಮಂದೀಪ್ ಸಿಂಗ್ ಸಿಧು ತಿಳಿಸಿದ್ದಾರೆ.
ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ ಕೈಯನ್ನು ಕತ್ತಿಯಿಂದ ಕತ್ತರಿಸಿದ್ದಾರೆ. ಇನ್ನಿಬ್ಬರು ಪೊಲೀಸ್ ಅಧಿಕಾರಿಗಳೂ ಕೂಡ ಗಂಭೀರ ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇವರೆಲ್ಲ ತರಕಾರಿ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದರು. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪಾಗಿ ನಿಂತಿದ್ದರು. ಅಲ್ಲಿ ಮೇಲ್ವಿಚಾರಣೆಯಲ್ಲಿ ತೊಡಗಿದ್ದ ಮಂಡಿ ಬೋರ್ಡ್ ಅಧಿಕಾರಿಗಳು ಅವರನ್ನು ಪ್ರಶ್ನೆ ಮಾಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಸರದಿಯಲ್ಲಿ ನಿಲ್ಲದೆ ಇದ್ದರೆ ಯಾವ ತರಕಾರಿಯನ್ನೂ ಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದರು. ಆಗ ಗಲಾಟೆ ಶುರುವಾಯಿತು. ಕರ್ತವ್ಯದಲ್ಲಿದ್ದ ಪೊಲೀಸರು ಹೋಗಿ ಗುಂಪಿನಲ್ಲಿದ್ದವರ ಬಳಿ ಕರ್ಫ್ಯೂ ಪಾಸ್ ತೋರಿಸಲು ಕೇಳಿದರು. ಅಷ್ಟಕ್ಕೇ ಹೀಗೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸದ್ಯ ಆ ಗುಂಪಿನಲ್ಲಿದ್ದ ಎಲ್ಲರ ವಿರುದ್ಧ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)