Maoists ಎನ್​ಕೌಂಟರ್​ನಲ್ಲಿ ಭಾಗಿಯಾಗಿದ್ದ ಅಧಿಕಾರಿ ಆತ್ಮಹತ್ಯೆ; ತನಿಖೆ ಆರಂಭಿಸಿದ ಪೊಲೀಸರು

Police encounter
Published on

ಹೈದರಾಬಾದ್​: ಪೊಲೀಸ್​ ಅಧಿಕಾರಿಯೊಬ್ಬರು ತಮ್ಮ ಸರ್ವೀಸ್​ ರಿವಾಲ್ವರ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ (ಡಿಸೆಂಬರ್​ 01) ನಡೆದ ಮಾವೋವಾದಿಗಳ (Maoists) ಎನ್​ಕೌಂಟರ್​ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.

ಮೃತರನ್ನು ರುದ್ರರಪು ಹರೀಶ್ ಎಂದು ಗುರುತಿಸಲಾಗಿದ್ದು, ಇವರು ವಾಜದೇವು ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಏತೂರನಗರ ಮಂಡಲದ ಮುಲ್ಲಕಟ್ಟಾ ಗ್ರಾಮದ ಬಳಿ ಇರುವ ರೆಸಾರ್ಟ್​ನಲ್ಲಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವೇಳೆ ಮಹಿಳೆಯೊಬ್ಬರು ಜತೆಗಿದ್ದರು ಎಂದು ವರದಿಯಾಗಿದೆ.

ಘಟನೆಯ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಅಧಿಕಾರಿಯು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿಲ್ಲ. ಘಟನೆ ನಡೆದ ವೇಳೆ ಅಧಿಕಾರಿಯ ಜೊತೆಗೆ ಮಹಿಳೆಯೊಬ್ಬರು ಇದ್ದರು ಎಂದು ರೆಸಾರ್ಟ್​ನ ಸಿಬ್ಬಂದಿ ಹೇಳಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಭಾನುವಾರ (ಡಿಸೆಂಬರ್​ 01) ನಡೆದ ಕಾರ್ಯಾಚರಣೆಯಲ್ಲಿ ಹರೀಶ್​ ಭಾಗಿಯಾಗಿದ್ದರು. ಕಾರ್ಯಾಚರಣೆ ಬಳಿಕ ಅವರು ರೆಸಾರ್ಟ್​​ಗೆ ಚೆಕ್​ ಇನ್​ ಆಗಿದ್ದು, ಸೋಮವಾರ ಬೆಳಗ್ಗೆ ಪೂಲ್​ನಲ್ಲಿ ಅವರು ಶೂಟೌಟ್​ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾರೆ. ಈ ವಿಚಾರವು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net