

ಚಂಡೀಗಢ: ಎಮ್ಮೆ ಕಳ್ಳತನ ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರನ್ನು ಹರಿಯಾಣದ ಜಾಗೃತ ದಳದ ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಘಟನೆ ಫರೀದಾಬಾದ್ನಲ್ಲಿ ನಿನ್ನೆ (ಡಿ.13) ನಡೆದಿದೆ.
ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುತ್ತಿದ್ದಂತೆ ಸ್ಥಳದಲ್ಲೇ ಹೈಡ್ರಾಮ ಸೃಷ್ಟಿಸಿದ ಎಸ್ಐ, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ತಾನು ಪಡೆದ ಲಂಚದ ಹಣವನ್ನು ನುಂಗಲು ಯತ್ನಿಸಿದ್ದರು. ಆದರೆ, ಹಣವನ್ನು ನುಂಗಲು ಅಧಿಕಾರಿಗಳು ಬಿಡಲಿಲ್ಲ. ಸಿಕ್ಕಿಬಿದ್ದ ಸಬ್ ಇನ್ಸ್ಪೆಕ್ಟರ್ನನ್ನು ಮಹೇಂದ್ರ ಉಲಾ ಎಂದು ಗುರುತಿಸಲಾಗಿದೆ. ಇಡೀ ಘಟನೆಯನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?
ಎಸ್ಐನನ್ನು ಜಾಗೃತ ದಳದ ಅಧಿಕಾರಿಗಳು ಲಂಚ ತೆಗೆದುಕೊಳ್ಳುವಾಗ ರೆಡ್ಹ್ಯಾಂಡ್ ಆಗಿ ಹಿಡಿದುಕೊಂಡಿದ್ದಾರೆ. ಎಲ್ಲಿ ಬಂಧನವಾಗುತ್ತೇನೋ ಎಂಬ ಭಯದಿಂದ ಎಸ್ಐ ತನ್ನ ಕೈಯಲ್ಲಿದ್ದ ಲಂಚದ ಹಣವನ್ನು ನುಂಗಲು ಯತ್ನಿಸಿ, ಬಾಯಿಗೆ ಹಾಕಿಕೊಂಡಿದ್ದಾನೆ. ಆದರೆ, ಅಧಿಕಾರಿಯೊಬ್ಬರು ಎಸ್ಐ ಬಾಯಿಗೆ ಕೈಹಾಕಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಹೇಗಾದರೂ ಸರಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಬೇಕೆಂದು ಸಾಕಷ್ಟು ಪ್ರಯತ್ನ ಮಾಡಿದ ಎಸ್ಐ, ನೆಲದ ಮೇಲೆ ಬಿದ್ದ ಹೊರಳಾಡಿದ್ದಾನೆ. ಕೊನೆಗೂ ಆತನನ್ನು ಬಿಡದ ಅಧಿಕಾರಿಗಳು ಕಾರಿನಲ್ಲಿ ಕೂರಿಸಿಕೊಂಡು ಅಲ್ಲಿಂದ ತೆರಳುತ್ತಾರೆ. ಇದರ ಮಧ್ಯೆ ಸಾರ್ವಜನಿಕನೊಬ್ಬ ಮಧ್ಯ ಪ್ರವೇಶ ಮಾಡಿದರೂ ಆತನನ್ನು ಅಧಿಕಾರಿಯೊಬ್ಬರು ದೂರ ತಳ್ಳುತ್ತಾರೆ.
ಅಧಿಕಾರಿಗಳ ಪ್ರಕಾರ ಸಂತ್ರಸ್ತ ವ್ಯಕ್ತಿ ಸುಭನಾಥ್ ಎಂಬುವರು ತಮ್ಮ ಎಮ್ಮೆಯನ್ನು ಕಳೆದುಕೊಂಡಿದ್ದರು. ಕಳ್ಳತನ ಮಾಡಿದ ಆರೋಪಿಯನ್ನು ಹಿಡಿದು ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ಸಂತ್ರಸ್ತನ ಬಳಿ ಎಸ್ಐ ಮಹೇಂದ್ರ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಮೊದಲೇ 6 ಸಾವಿರ ರೂ. ಹಣ ಪಡೆದಿದ್ದ. ಉಳಿದ ಹಣವನ್ನು ಕೊಡುವ ಮುನ್ನ ಸಂತ್ರಸ್ತ, ಜಾಗೃತ ದಳದ ಅಧಿಕಾರಿಗಳ ಬಳಿ ದೂರು ನೀಡಿದ್ದು, ಬಳಿಕ ಉಳಿದ ಹಣವನ್ನು ಕೊಡುವ ಸಮಯದಲ್ಲಿ ಎಸ್ಐನನ್ನು ರೆಡ್ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ. (ಏಜೆನ್ಸೀಸ್)