ಹಿರಿಯ ಅಧಿಕಾರಿಯ ಕಿರುಕುಳ ತಾಳಲಾಗದೆ ಠಾಣೆಯೊಳಗೇ ಶೂಟ್​ ಮಾಡ್ಕೊಂಡು ಸತ್ತ ಎಎಸ್​​ಐ!

Cop
Published on

ಚಂಡೀಗಢ: ಹಿರಿಯ ಪೊಲೀಸ್ ಅಧಿಕಾರಿಗಳ ಕಿರುಕುಳ ತಾಳಲಾರದೆ ಅಸಿಸ್ಟೆಂಟ್​ ಸಬ್​ ಇನ್​ಸ್ಪೆಕ್ಟರೊಬ್ಬರು ಪೊಲೀಸ್ ಠಾಣೆಯೊಳಗೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಡೆದಿದೆ. ಅಲ್ಲದೆ ಸಾಯುವ ಮುನ್ನ ಈ ಅಧಿಕಾರಿ ತನ್ನ ಆತ್ಮಹತ್ಯೆಗೆ ಕಾರಣ ಏನೆಂಬುದನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಹರಿಯಾಣ ಪೊಲೀಸ್​ ಠಾಣೆಯ ಎಎಸ್ಐ ಸತೀಶ್ ಕುಮಾರ್​ (52) ಆತ್ಮಹತ್ಯೆ ಮಾಡಿಕೊಂಡವರು. ಇಂದು ಬೆಳಗ್ಗೆ ಇವರು ಠಾಣೆಯೊಳಗೇ ಶೂಟ್ ಮಾಡಿಕೊಂಡು ಸಾವಿಗೀಡಾಗಿದ್ದಾರೆ. ತಾಂಡಾ ಪೊಲೀಸ್ ಠಾಣೆಯ ಸ್ಟೇಷನ್​ ಹೌಸ್ ಆಫೀಸರ್ ಓಂಕಾರ್ ಸಿಂಗ್ ವಿರುದ್ಧ ಕಿರುಕುಳ ಆರೋಪ ಹೊರಿಸಿ ವಿಡಿಯೋ ಮಾಡಿದ್ದು, ಡೆತ್​​ನೋಟ್ ಕೂಡ ಸಿಕ್ಕಿದೆ.

ಗುರುವಾರ ಪರಿಶೀಲನೆಗೆ ಬಂದಿದ್ದ ಓಂಕಾರ್ ಸಿಂಗ್​, ಬಾಕಿ ಇರುವ ಕೇಸ್​ಗಳ ಬಗ್ಗೆ ಪ್ರಶ್ನಿಸಿದ್ದರು. ಪಂಜಾಬ್​ ಮತ್ತು ಹರಿಯಾಣ ಹೈಕೋರ್ಟ್​ಗಳಲ್ಲಿ ಮರುದಿನ ವಿಚಾರಣೆಗೆ ಬರಲಿದ್ದ ಕೇಸ್​ಗಳ ಕುರಿತು ಪ್ರಶ್ನಿಸಿದ್ದರು. ಆ ಪೈಕಿ ಒಂದರ ತನಿಖೆಯ ಜವಾಬ್ದಾರಿ ಮಾತ್ರ ತನ್ನಗಾಗಿದ್ದು, ಉಳಿದವುಗಳ ಬಗ್ಗೆ ಸಂಬಂಧಪಟ್ಟ ತನಿಖಾಧಿಕಾರಿಗಳನ್ನು ಕೇಳಬೇಕು ಎಂದು ಸತೀಶ್ ಉತ್ತರಿಸಿದ್ದರು. ಆದರೆ ಆ ಬಳಿಕ ಓಂಕಾರ್ ಸಿಂಗ್​ ತನಗೆ ಕಿರುಕುಳ ನೀಡಲಾರಂಭಿಸಿದ್ದು, ರೆಕಾರ್ಡ್ ಬುಕ್​ನಲ್ಲಿ ದೂರು ಕೂಡ ದಾಖಲಿಸಿದ್ದರು ಎಂದು ಸತೀಶ್ ಹೇಳಿಕೊಂಡಿದ್ದಾರೆ. ಹೀಗೆ ಸತಾಯಿಸುವ ಬದಲು ನೀವು ನನಗೆ ಶೂಟ್ ಮಾಡಿದ್ದರೆ ಒಳ್ಳೆಯದಿತ್ತು ಎಂದು ನಾನು ಅವರಿಗೆ ಉತ್ತರಿಸಿದ್ದಾಗಿ ಹೇಳಿಕೊಂಡಿರುವ ಸತೀಶ್ ಕುಮಾರ್, ಕೊನೆಗೆ ತಾವೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೆ. 6ರಂದು ಇನ್ನೊಬ್ಬ ಎಎಸ್​​ಐ ಮುಕ್ತ್ಸರ್ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರು ಹಿರಿಯ ಅಧಿಕಾರಿಗಳಿಂದ ಸಮಸ್ಯೆ ಎದುರಿಸುತ್ತಿದ್ದರೆ ತಮ್ಮನ್ನು ಸಂಪರ್ಕಿಸುವಂತೆ ಹೊಷಿಯಾರ್​ಪುರದ ಎಸ್​ಪಿ ಸರ್ತಾಜ್​ ಸಿಂಗ್ ಚಾಹಲ್​ ಈ ಪ್ರಕರಣದ ಬಳಿಕ ಇತರ ಪೊಲೀಸರಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net