

ಪುಣೆ: ಮಹಾರಾಷ್ಟ್ರದ ಯುವ ವೈದ್ಯೆ ( Maharashtra Doctor ) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೋಪಾಲ್ ಬಾದ್ನೆ ಎಂಬುವರನ್ನು ಬಂಧಿಸಲಾಗಿದೆ. ಡೆತ್ನೋಟ್ನಲ್ಲಿ ಬಾದ್ನೆ ವಿರುದ್ಧ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಶನಿವಾರ (ಅ.25) ಸಂಜೆ ಬಂಧನ ಮಾಡಲಾಗಿದೆ.
ಅದಕ್ಕೂ ಮುನ್ನ ಅಂದರೆ, ಶನಿವಾರ ಮುಂಜಾನೆ ಫಾಲ್ಟನ್ ಠಾಣೆಯ ಪೊಲೀಸರ ತಂಡವು ಪುಣೆಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಪ್ರಶಾಂತ್ ಬಂಕರ್ ಅವರನ್ನು ಬಂಧಿಸಿತು. ಮೃತ ವೈದ್ಯೆ ತನ್ನ ಡೆತ್ನೋಟ್ನಲ್ಲಿ ಹೆಸರಿಸಿದ್ದ ಇಬ್ಬರು ವ್ಯಕ್ತಿಗಳಲ್ಲಿ ಪ್ರಶಾಂತ್ ಕೂಡ ಒಬ್ಬರು. ಪಿಎಸ್ಐ ಬಾದ್ನೆ, ಫಾಲ್ಟನ್ ಗ್ರಾಮೀಣ ಪೊಲೀಸ್ ಠಾಣೆಗೆ ಆಗಮಿಸಿ ಶರಣಾದರು ಎಂದು ಸತಾರಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ತುಷಾರ್ ದೋಷಿ ಅವರು ತಿಳಿಸಿದ್ದಾರೆ.
ಸಂತ್ರಸ್ತೆಗೆ ಮಾನಸಿಕ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಎದುರಿಸುತ್ತಿರುವ ಬಂಕರ್ನನ್ನು ಸತಾರಾ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಬಳಿಕ ನ್ಯಾಯಾಲಯವು ಆತನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಅಂದಹಾಗೆ, ಮೃತ ಯುವ ವೈದ್ಯೆ ಮಧ್ಯ ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಬೀಡ್ ಜಿಲ್ಲೆಯ ನಿವಾಸಿ. ಆಕೆ, ಸತಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಗುರುವಾರ (ಅ.23) ರಾತ್ರಿ ಫಾಲ್ಟನ್ ಪಟ್ಟಣದ ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವೈದ್ಯೆಯ ಶವ ಪತ್ತೆಯಾಗಿತ್ತು. ತನ್ನ ಎಡ ಅಂಗೈಯಲ್ಲಿ ಡೆತ್ನೋಟ್ ಬರೆದಿದ್ದ ಸಂತ್ರಸ್ತೆ, ಎಸ್ಐ ಗೋಪಾಲ್ ಬಾದ್ನೆ ಎಂಬುವರ ವಿರುದ್ಧ ದೈಹಿಕ ಮತ್ತು ಮಾನಸಿಕ ಕಿರುಕುಳ ಆರೋಪ ಮಾಡಿದ್ದಾರೆ. ಅಲ್ಲದೆ, ಆತನ ನಿರಂತರ ಕಿರುಕುಳದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಎಸ್ಐ ಬಾದ್ನೆ ಅವರನ್ನು ಇದೀಗ ಅಮಾನತು ಮಾಡಲಾಗಿದೆ.
ಪೊಲೀಸರ ಪ್ರಕಾರ, ಆರೋಪಿ ಬಂಕರ್, ವೈದ್ಯೆ ವಾಸಿಸುತ್ತಿದ್ದ ಮನೆಯ ಮಾಲೀಕರ ಮಗ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆತನಿಗೆ ಫೋನ್ ಕರೆ ಮಾಡಿ, ಚಾಟ್ ಕೂಡ ಮಾಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ಶುಕ್ರವಾರ (ಅ.24) ರಾತ್ರಿ ಬೀಡ್ನ ವಡ್ವಾನಿ ತಾಲೂಕಿನಲ್ಲಿರುವ ಅವರ ಹುಟ್ಟೂರಿನಲ್ಲಿ ಯುವ ವೈದ್ಯೆಯ ಅಂತ್ಯಕ್ರಿಯೆ ನಡೆಸಲಾಯಿತು. ಈ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಆಕೆಯ ಸಂಬಂಧಿಕರು ಒತ್ತಾಯಿಸುತ್ತಿದ್ದಾರೆ. ಕಿರುಕುಳದ ಬಗ್ಗೆ ಆಕೆ ಹಲವು ಬಾರಿ ದೂರು ನೀಡಿದ್ದರೂ, ಆಕೆಯ ಕುಂದುಕೊರತೆಗಳನ್ನು ಪರಿಹರಿಸಿಲ್ಲ ಎಂದು ಸಂಬಂಧಿಯೊಬ್ಬರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗಂಭೀರ ಆರೋಪ ಮಾಡಿದರು.
ಜೂನ್ 19 ರಂದು ಫಾಲ್ಟನ್ ಉಪ-ವಿಭಾಗೀಯ ಕಚೇರಿಯ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ)ಗೆ ಬರೆದ ಪತ್ರದಲ್ಲಿ ಇದೇ ರೀತಿಯ ಆರೋಪಗಳನ್ನು ಸಂತ್ರಸ್ತೆ ಮಾಡಿದ್ದರು. ಫಾಲ್ಟನ್ ಗ್ರಾಮೀಣ ಪೊಲೀಸ್ ಇಲಾಖೆಯ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಕಿರುಕುಳದ ಆರೋಪ ಹೊರಿಸಿ, ಅವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಡಿಎಸ್ಪಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದರು. ಡಿಎಸ್ಪಿಗೆ ಬರೆದ ಪತ್ರದಲ್ಲಿ ಎಸ್ಐ ಗೋಪಾಲ್ ಬಾದ್ನೆ, ಉಪ-ವಿಭಾಗೀಯ ಪೊಲೀಸ್ ಇನ್ಸ್ಪೆಕ್ಟರ್ ಪಾಟೀಲ್ ಮತ್ತು ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಲಾಡ್ಪುತ್ರೆ ಅವರ ಹೆಸರನ್ನು ಸಂತ್ರಸ್ತೆ ಬರೆದಿದ್ದರು. ತಾನು ತೀವ್ರ ಒತ್ತಡದಲ್ಲಿರುವುದಾಗಿ ಮತ್ತು ಈ ವಿಷಯದ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆ ವಿನಂತಿಸಿದ್ದರು. ಆದರೆ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ವೈದ್ಯೆ ಸಾವಿಗೆ ಶರಣಾಗಿದ್ದು, ಈ ಪ್ರಕರಣ ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಆದೇಶದ ಮೇರೆಗೆ ಎಸ್ಐ ಬಾದ್ನೆ ಅವರನ್ನು ಅಮಾನತು ಮಾಡಲಾಗಿದೆ. ಇದರ ನಡುವೆ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಡೆತ್ನೋಟ್ ಬಹಿರಂಗವಾದ ಬೆನ್ನಲ್ಲೇ ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿವೆ. (ಏಜೆನ್ಸೀಸ್)