ಮೇಲ್ಮನೆ ಗೆಲ್ಲಲು ಮೈತ್ರಿ ಪಕ್ಷಗಳ ಸಮನ್ವಯ ಸಭೆ; ಒಗ್ಗಟ್ಟು ಪ್ರದರ್ಶನ

bjj
Published on

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜಂಟಿಯಾಗಿ ಕುಸ್ತಿ ಆಡಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ವಿಧಾನ ಪರಿಷತ್ತಿನಲ್ಲೂ ಆಡಳಿತ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿವೆ.

ಮೈತ್ರಿ ಅಭ್ಯರ್ಥಿಗಳ ಗೆಲುವು, ಪಕ್ಷ ಸಂಘಟನೆಯನ್ನು ಕೇಂದ್ರೀಕರಿಸಿ ಉಭಯ ಪಕ್ಷಗಳ ಸಮನ್ವಯ ಸಭೆ ನಡೆಸಿವೆ. ಆ ಮೂಲಕ ಒಗ್ಗಟ್ಟು ಪ್ರದರ್ಶಿಸಿವೆ.

ಲೋಕಸಭೆ ಚುನಾವಣೆ ಬಳಿಕ ಮೇಲ್ಮನೆ ಚುನಾವಣೆಗೂ ಮೈತ್ರಿ ಮುಂದುವರಿಸಿರುವ ಜೆಡಿಎಸ್-ಬಿಜೆಪಿ ಮೇಲ್ಮನೆಯಲ್ಲಿ ಮೇಲುಗೈ ಸಾಧಿಸಲು ಸಂಕಲ್ಪ ಮಾಡಿವೆ.

ಜೆ.ಪಿ.ಭವನದಲ್ಲಿ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ ಕುರಿತ ಜೆಡಿಎಸ್-ಬಿಜೆಪಿ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಹಣ, ಗ್‌ಟಿಗಳನ್ನು ಹಂಚಿ ಗೆಲುವು ಸಾಧಿಸಲು ಹೊರಟಿದೆ ಎಂದು ಆರೋಪ ಮಾಡಿದರು.

ಶಿಕ್ಷಕರು, ಪದವೀಧರರು ಮತ ಹಾಕುವ ಈ ಚುನಾವಣೆಯನ್ನು ಕಾಂಗ್ರೆಸ್ ಕಲುಷಿತಗೊಳಿಸುತ್ತಿದೆ. ಈಗಾಗಲೇ ಅಧಿಕಾರಿಗಳು ಅನೇಕ ಕಡೆ ದಾಳಿ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಹಂಚುತ್ತಿದ್ದ ಗ್‌ಟಿ ಬಾಕ್ಸ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಜೆಡಿಎಸ್-ಬಿಜೆಪಿ ಮೈತ್ರಿ ಐತಿಹಾಸಿಕ. ಪ್ರಧಾನಿ ಮೋದಿ ಹಾಗೂ ದೇವೆಗೌಡರ ನೇತೃತ್ವದಲ್ಲಿ ಆಗಿರುವ ಈ ಮೈತ್ರಿಯನ್ನು ಎರಡೂ ಪಕ್ಷಗಳ ಕಾರ್ಯಕರ್ತರು ಮುಕ್ತವಾಗಿ ಸ್ವಾಗತಿಸಿದ್ದಾರೆ. ಈ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಬರುತ್ತದೆ. ಇದನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ಗೆ ಆಗುತ್ತಿಲ್ಲ ಎಂದು ಕಿಡಿಕಾರಿದರು.

ಬ್ರ್ಯಾಂಡ್ ಅಲ್ಲ, ಲೂಟಿ ಬೆಂಗಳೂರು

ಬೆಂಗಳೂರು ಜನರು ಗಮನಿಸಬೇಕು. ಮನೆಗಳಿಗೆ ನೀರು ನುಗ್ಗಿದೆ. ಜನರು ಮನೆ ಖಾಲಿ ಮಾಡಿ ಹೋಟೆಲ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಇದು ಬ್ರ್ಯಾಂಡ್ ಬೆಂಗಳೂರು ಅಲ್ಲ, ಲೂಟಿ ಬೆಂಗಳೂರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊನ್ನೆ ಯಾವತ್ತೊ ಬಿಡಿಎ ಕಚೇರಿಯಲ್ಲಿ ಕ್ಲೋಸ್ಡ್ ಡೋರ್ ಮೀಟಿಂಗ್ ಮಾಡಿದ್ದಾರೆ. ಏನಕ್ಕೆ ಆ ಸಭೆ? ಲೂಟಿ ಹೊಡೆಯೋದಕ್ಕಾ? ಎಂದು ಖಾರವಾಗಿ ಪ್ರಶ್ನಿಸಿದರು.

ಅನ್ನಭಾಗ್ಯ ಅಕ್ಕಿ ಹಣ ಕೊಟ್ಟಿಲ್ಲ

ಗ್ಯಾರಂಟಿಗಳಿಂದ ಜನರನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳುತ್ತಿರುವ ಈ ಸರಕಾರಕ್ಕೆ ಅನ್ನಭಾಗ್ಯದ 175 ರೂಪಾಯಿ ಹಣ ಕೊಡುವ ಯೋಗ್ಯತೆ ಇಲ್ಲ. ಎರಡು ಮೂರು ತಿಂಗಳಿಂದ ಇವರಿಂದ ಹಣ ಕೊಡಲು ಆಗಿಲ್ಲ, ಯಾವ ಕುಟುಂಬಕ್ಕೂ ಹಣ ಕೊಟ್ಟಿಲ್ಲ, ಹಾಲು ಉತ್ಪಾದಕರ ಸಹಾಯಧನ ಕೊಟ್ಟಿಲ್ಲ, ಮಳೆ ಬರುತ್ತಿದೆ, ಬಿತ್ತನೆ ಬೀಜ ದುಬಾರಿ ಆಗಿದೆ. ಬಿತ್ತನೆ ಬೀಜದ ಬೆಲೆ ಶೇ.75 ಏರಿಸಿದ್ದಾರೆ. ಹಳೆಯ ಪಿಂಚಣಿ ಯೋಜನೆಯ ಬಗ್ಗೆ ಇವರು ಸುಳ್ಳು ಹೇಳುತ್ತಿದ್ದಾರೆ. ಹೊಸ ಪಿಂಚಣಿ ಯೋಜನೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಸರ್ಕಾರ ಎಂದು ಕಾಂಗ್ರೆಸ್ ಮೇಲೆ ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net