ರೈತರ ಹಿತರಕ್ಷಣೆಗೆ ಸಹಕಾರ ಸಂಘಗಳು ಮುಂದಾಗಲಿ: ಸಚಿವ ಕೃಷ್ಣಬೈರೇಗೌಡ

sahakara
Published on

ಬೆಂಗಳೂರು: ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸುತ್ತಿದ್ದು, ಈ ಕಾರ್ಯವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ವಿಸ್ತರಿಸಬೇಕಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಬ್ಯಾಟರಾಯನಪುರದ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತವು (ವಿಎಸ್‌ಎಸ್‌ಎಸ್‌ಎನ್) ಜಕ್ಕೂರಿನ ಕೆಂಪೇಗೌಡ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯವಸಾಯ ಸೇವಾ ಸಹಕಾರ ಸಂಘಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದರ ಜತೆಗೆ ರಾಜ್ಯದ ರೈತರಿಗೆ ಕೃಷಿ ಚಟುವಟಿಕ ನಡೆಸಲು ಹಲವು ರೀತಿಯಲ್ಲಿ ಸಹಕರಿಸಬೇಕು. ಜತೆಗೆ ಸಮಾಜದ ಬಡ ಜನರಿಗೂ ಸಾಲಸೌಲಭ್ಯ ಒದಗಿಸಿ ಅನುಕೂಲ ಮಾಡಿಕೊಡಬೇಕು ಎಂದು ಕಿವಿಮಾತು ಹೇಳಿದರು.

ಬ್ಯಾಟರಾಯನಪುರ ವ್ಯವಸಾಯ ಸೇವಾ ಸಹಕಾರ ಸಂಘವು 6 ಕೋಟಿ ರೂ. ಠೇವಣಿಯೊಂದಿಗೆ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದು, ಈ ಭಾಗದ ರೈತರಿಗೆ ಅಗತ್ಯ ಸಹಕಾರ ನೀಡುತ್ತಿರುವುದು ಸಂತೋಷದ ಸಂಗತಿ. ರಾಜ್ಯದ ರೈತರ ಹಿತ ಕಾಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಡಿಸಿಸಿ ಬ್ಯಾಂಕ್ ಗಳ ಮೂಲಕ ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ಯೋಜನೆ ರೂಪಿಸಿದೆ ಇದರಿಂದ ರಾಜ್ಯದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.

ಜಮೀನು ಮಂಜೂರಾತಿಗೆ ಮನವಿ:

ಇದೇ ವೇಳೆ ಸಹಕಾರ ಸಂಘದ ಕಾರ್ಯ ಚಟುವಟಿಕೆಗಾಗಿ ಜಕ್ಕೂರಿನಲ್ಲಿ ಗುರುತಿಸಿರುವ 10 ಗುಂಟೆ ಜಮೀನನ್ನು ಮಂಜೂರು ಮಾಡಿಸಿಕೊಡುವಂತೆ ಸಂಘದ ಪದಾಧಿಕಾರಿಗಳು ಸಚಿವ ಕೃಷ್ಣಬೈರೇಗೌಡರಿಗೆ ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮೋಹನ್‌ರಾಜ್, ಉಪಾಧ್ಯಕ್ಷ ಎಸ್.ಸೋಮಶೇಖರ್, ನಿರ್ದೇಶಕರಾದ ಬಿ.ಎಸ್.ರಾಜಶೇಖರ್, ಎಲ್.ನಂಜಪ್ಪ, ರತ್ನಮ್ಮ, ಸುಧಾಕರ್, ಬಸವರಾಜ್, ಕಾರ್ತೀಕ್‌ಕೃಷ್ಣ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net