

ತೀರ್ಥಹಳ್ಳಿ: ಸಹಕಾರ ಸಂಸ್ಥೆಗಳೇ ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು. ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲಿವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
ಸಹ್ಯಾದ್ರಿ ವಿವಿಧೋದ್ದೇಶ ಅಡಕೆ ಬೆಳೆಗಾರರ ಮಾರಾಟ ಸಹಕಾರ ಸಂಘ ಮತ್ತು ಶರಾವತಿ ಪತ್ತಿನ ಸಹಕಾರ ಸಂಘಗಳ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಕೇವಲ 5 ಲಕ್ಷ ರೂ. ಮೂಲ ಬಂಡವಾಳದಿಂದ ತಾಲೂಕು ಕೇಂದ್ರದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಸಾವಿರ ಕೋಟಿ ರೂ.ಗೂ ಅಧಿಕ ವ್ಯವಹಾರ ನಡೆಸಿರುವ ಸಹ್ಯಾದ್ರಿ ಸಂಸ್ಥೆಯ ಸಾಧನೆ ಪ್ರಶಂಸನೀಯ ಎಂದರು.
ಸಾಂಪ್ರದಾಯಿಕ ಸಂಸ್ಕರಣೆ ಕೊರತೆ ಮತ್ತು ಅವಕಾಶವಾದಿಗಳ ಕಲಬೆರಕೆ ದಂಧೆಯಿಂದಾಗಿ ಮಲೆನಾಡಿನ ದೇಶಾವರಿ ಅಡಕೆಯ ಮಾನ ಹರಾಜಾಗುತ್ತಿದೆ. ಈ ಬಗ್ಗೆ ಅಡಕೆ ಬೆಳೆಗಾರರು ಎಚ್ಚೆತ್ತಕೊಳ್ಳಬೇಕು. ಇಲ್ಲವಾದಲ್ಲಿ ರೈತರು ಸಂಕಷ್ಟಕ್ಕೀಡಾಗುವ ದಿನಗಳು ದೂರವಿಲ್ಲ. ಈ ಭಾಗದ ರೈತರು ಸೇರಿ ಸಮಸ್ತ ಜನರ ಬದುಕು ಅಡಕೆ ಬೆಳೆ ಮೇಲೆ ನಿಂತಿದೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಅವಕಾಶವಾದಿ ಮಧ್ಯವರ್ತಿಗಳು ಕೇರಳದ ಅಡಕೆಗೆ ರೆಡ್ ಆಕ್ಸೈಡ್ ಬಳಸಿ ಗುಣಮಟ್ಟದ ಅಡಕೆಯೊಂದಿಗೆ ಬೆರಸುತ್ತಿದ್ದಾರೆ. ಕಳಪೆ ಗುಣಮಟ್ಟದ ಅಡಕೆಯ ಕಾರಣ ಮಾರುಕಟ್ಟೆಯಲ್ಲಿ ಜಿಲ್ಲೆಯಿಂದ ಹೋಗಿರುವ ಸಾವಿರಾರು ಮೂಟೆ ಅಡಕೆ ವಾಪಸಾಗಿರುವುದು ಅಪಾಯದ ಮುನ್ಸೂಚನೆ ಎಂದು ಎಚ್ಚರಿಸಿದರು.
ಸಹ್ಯಾದ್ರಿ ವಿವಿಧೋದ್ದೇಶ ಅಡಕೆ ಬೆಳೆಗಾರರ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಚ್.ಎನ್.ವಿಜಯದೇವ್, ಶರಾವತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ವಿ.ಅಜಿತ್, ರೇವತಿ ಅನಂತಮೂರ್ತಿ, ಸಿ.ಕೆ.ಪ್ರಸನ್ನ, ದುಗ್ಗಪ್ಪ ಗೌಡ, ನಾಗಭೂಷಣ್, ಶಚ್ಚೀಂದ್ರ ಹೆಗ್ಡೆ, ವಿನಂತಿ ಶಿವಾನಂದ್, ವನಜಾಕ್ಷಿ ಇತರರಿದ್ದರು.