

ಅರಸೀಕೆರೆ: ಶಾಂತಿ, ಸುವ್ಯವಸ್ಥೆ ಕಾಪಾಡುವ ಜತೆಗೆ ಅಪರಾಧ ಪ್ರಕರಣ ಪತ್ತೆ ಮಾಡಲು ಸಂಘ ಸಂಸ್ಥೆಗಳು ಆರಕ್ಷಕ ಇಲಾಖೆಯೊಂದಿಗೆ ಕೈ ಜೋಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.
ನಗರಸಭೆ ಸದಸ್ಯೆ ಸುಜಾತಾ ರಮೇಶ್ ಬಳಗದ ವತಿಯಿಂದ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಮನೆಯನ್ನು ಫಲಾನುಭವಿಗೆ ವಿತರಿಸಿ ಮಾತನಾಡಿದರು.
ಜ್ಞಾನ, ವಿಜ್ಞಾನ, ತಂತ್ರಜ್ಞಾನ ಪ್ರಗತಿ ಪಥದಲ್ಲಿ ಸಾಗಿದ್ದು ಅಷ್ಟೇ ಪ್ರಮಾಣದಲ್ಲಿ ವಾಹನ, ಚಿನ್ನಾಭರಣ ಕಳವು, ಕೊಲೆ, ಅತ್ಯಾಚಾರ, ದರೋಡೆಯಂತಹ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಎಲ್ಲ ಕೆಲಸ ಪೊಲೀಸರು ನೋಡಿಕೊಳ್ಳುತ್ತಾರೆ ಎನ್ನುವ ಮನೋಭಾವನೆಯಿಂದ ಜನರು ಹೊರಬರಬೇಕು. ಇದಕ್ಕೆ ಪೂರಕ ಎನ್ನುವಂತೆ ನಗರಸಭೆ ಸದಸ್ಯ ರಮೇಶ್ ಬಳಗ ಮಾರುತಿನಗರದ 31ನೇ ವಾರ್ಡಿನಲ್ಲಿ ಆಯಕಟ್ಟಿನ ಜಾಗದಲ್ಲಿ 40 ಸಿಸಿಟಿವಿ ಕ್ಯಾಮರಾಗಳನ್ನು ಉಚಿತವಾಗಿ ಅಳವಡಿಕೆ ಮಾಡುವ ಕೆಲಸಕ್ಕೆ ಮುಂದಾಗಿರುವುದು ಇನ್ನಿತರರಿಗೂ ಪ್ರೇರಣೆಯಾಗಿದೆ ಎಂದರು.
ಬೆಂಗಳೂರಿನ ಬಿಬಿಎಂಪಿ ವಾರ್ಡ್‌ಗಳಲ್ಲೂ ಇಂತಹ ಆಲೋಚನೆ ಅನುಷ್ಠಾನ ತರಲು ಪ್ರಯತ್ನ ನಡೆದಿಲ್ಲ. ಅಪರಾಧ ಪ್ರಕರಣ ಪತ್ತೆ ಮಾಡಲು ಸಂಘ ಸಂಸ್ಥೆಗಳು ಪೊಲೀಸರಿಗೆ ಸಹಕಾರ ನೀಡಿದರೆ ಅನುಕೂಲವಾಗಲಿದೆ. ಬಳಗ ಹಮ್ಮಿಕೊಳ್ಳುವ ಎಲ್ಲ ಜನಪರ ಕೆಲಸಗಳಿಗೆ ನೆರವು ನೀಡಲು ಸಂಘಟನೆ ಸಿದ್ಧವಾಗಿದೆ ಎಂದು ಭರವಸೆ ನೀಡಿದರು.
ಅನಂತ ಇಂಟರ್‌ನ್ಯಾಷನಲ್ ಶಾಲೆಯ ಚೇರ್ಮನ್ ಆರ್.ಅನಂತಕುಮಾರ್ ಮಾತನಾಡಿ, ಅನಾರೋಗ್ಯ ಪೀಡಿತರಿಗೆ ಔಷಧ, ಮಾತ್ರೆ ವಿತರಣೆ, ಅಶಕ್ತರಿಗೆ ಮನೆ ನಿರ್ಮಾಣ ಮಾಡಿಕೊಡುವುದು, ಉಚಿತ ಲ್ಯಾಪ್‌ಟಾಪ್ ಕೊಡುಗೆ, ವಿದ್ಯಾರ್ಥಿ ವೇತನ ಸವಲತ್ತು ಸೇರಿದಂತೆ ಹಲವು ರೀತಿಯ ಸಮಾಜಮುಖಿ ಕೆಲಸದಲ್ಲಿ ಸುಜಾತಾ ರಮೇಶ್ ಬಳಗ ಹಲವು ವರ್ಷಗಳಿಂದ ತೊಡಗಿಸಿಕೊಂಡಿದೆ. ಇದೀಗ ವಾರ್ಡ್ ನಿವಾಸಿಗಳ ಸುರಕ್ಷತೆ ಮನಗಂಡು ಸಿಸಿಟಿವಿ ಅಳವಡಿಕೆ ಮಾಡಲು ಮುಂದಡಿ ಇಟ್ಟಿರುವುದು ಪ್ರಶಂಸನೀಯ ಎಂದರು.
ನಗರಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ ಮಾತನಾಡಿ, ಮನೆಗಳವು, ಬೈಕ್ ವೀಲಿಂಗ್, ದರೋಡೆ ಮೊದಲಾದ ಪ್ರಕರಣ ಪತ್ತೆಗೆ ಸಿಸಿಟಿವಿ ನೆರವಾಗುತ್ತದೆ. ನಗರಸಭೆ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಯೋಜನೆ ಕಾರ್ಯಗತಗೊಳಿಸಲು ಮುಂದಾಗಬೇಕು ಎಂದು ಹೇಳಿದರು.
ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ಸಂಘ ಸಂಸ್ಥೆಗಳ ಕೆಲಸವನ್ನು ನಾಗರಿಕರು ಪ್ರೋತ್ಸಾಹಿಸಿ ಬೆನ್ನು ತಟ್ಟಬೇಕು. ಆದರೆ ಒಳ್ಳೆಯ ಕೆಲಸಕ್ಕೆ ಅಡ್ಡಿ ಮಾಡಬೇಡಿ ಎಂದು ಪರೋಕ್ಷವಾಗಿ ಮಾತಿನ ಚಾಟಿ ಬೀಸಿದರು.
ಬೆಂಗಳೂರು ನಗರ ಕರವೇ ಅಧ್ಯಕ್ಷ ಧರ್ಮರಾಜ್‌ಗೌಡ, ನಗರಸಭೆ ಸದಸ್ಯೆ ಶ್ವೇತಾ ರಮೇಶ್ ನಾಯ್ಡು, ವಕೀಲ ವಿವೇಕ್, ತಾಲೂಕು ಕರವೇ ಅಧ್ಯಕ್ಷ ಕಿರಣ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷ ತುಳಸಿ, ಬಳಗದ ಸಂತೋಷ್, ಶಿವಣ್ಣ, ಕುಮಾರ್, ಕೃಷ್ಣ, ವಸಂತ್ ಮೊದಲಾದವರು ಹಾಜರಿದ್ದರು.