ಜಾತ್ರಾ ಮಹೋತ್ಸವಕ್ಕೆ ಸಹಕಾರ ನೀಡಿ

20240118_141344
Published on

ಮೂಗೂರು: ಗ್ರಾಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಪೊಲೀಸರೊಂದಿಗೆ ಸೌಹಾರ್ದತೆಯಿಂದ ವರ್ತಿಸಿ ಜಾತ್ರಾ ಮಹೋತ್ಸವಕ್ಕೆ ಸಹಕಾರ ನೀಡಬೇಕು ಎಂದು ನಂಜನಗೂಡು ಡಿವೈಎಸ್ಪಿ ವಿ.ಗೋವಿಂದರಾಜು ಮನವಿ ಮಾಡಿದರು.


ಮೂಗೂರಿಲ್ಲಿ ಜ.25ರಿಂದ 29 ರವರೆಗೆ ನಡೆಯಲಿರುವ ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಸಂಚಾರ ನಿಯಮಗಳನ್ನು, ಪೊಲೀಸರ ಸಲಹೆಗಳನ್ನು ತಪ್ಪದೆ ಪಾಲಿಸಬೇಕು. ಆಯಾಯ ಕೋಮಿನ ಮುಖಂಡರು ಕುಲದ ಕಟ್ಟುಪಾಡುಗಳನ್ನು ಮೀರದಂತೆ ಯುವಕರಿಗೆ ಎಚ್ಚರಿಕೆ ನೀಡಬೇಕು. ಸ್ಥಳೀಯ ಮುಖಂಡರ ಸಲಹೆ ಸೂಚನೆಯಂತೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.


ತಿ.ನರಸೀಪುರ ಠಾಣೆ ಪೊಲೀಸ್ ನಿರೀಕ್ಷಕ ಧನಂಜಯ ಮಾತನಾಡಿ, ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಜಾತ್ರೆ ವೇಳೆ ಯಾವುದೇ ಚಿತ್ರನಟರ ಫೋಟೋ, ಬಾವುಟಗಳನ್ನು ಪ್ರದರ್ಶನ ಮಾಡುವಂತಿಲ್ಲ. ಸಾಂಪ್ರದಾಯಿಕ, ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬಾರದಂತೆ ಜಾತ್ರಾ ಮಹೋತ್ಸವ ಸುಗಮವಾಗಿ ನಡೆಯಬೇಕು ಎಂದರು.


ಗ್ರಾಮದ ಕೆಲವು ಬೀದಿ ಅಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಗ್ರಾಮದಲ್ಲಿ ಶಾಂತಿ ನೆಮ್ಮದಿ ಜೀವನಕ್ಕೆ ಅನುವು ಮಾಡಿಕೊಡುವಂತೆ ಮುಖಂಡರು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷ ಶಿವಣ್ಣ, ಎಂ.ಕೆ.ಸಿದ್ದರಾಜು, ಎಂ.ಎನ್.ಸೋಮಣ್ಣ, ಪಾರುಪತ್ತೆದಾರ ಸಾಗರ್, ಗೌಡರ ಎಂ.ಪಿ.ನಾಗರಾಜು, ಎಂ. ಆರ್.ಸುಂದರ್, ಎಂ.ಪಿ.ಮರಿಸ್ವಾಮಿ, ಗ್ರಾಪಂ ಸದಸ್ಯ ಲೋಕೇಶ್, ಶಿವಕುಮಾರ್, ಡೇರಿ ನಾಗೇಂದ್ರ, ಜಿ.ಪಿ.ಪುಟ್ಟ ಮಾದಯ್ಯ, ಕುಮಾರಸ್ವಾಮಿ, ಮಹದೇವಯ್ಯ ರಮೇಶ್, ಹೇಮೇಶ್, ರವಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net