10ನೇ ದಿನಕ್ಕೆ 'ಕೂಲಿ' ಗಳಿಸಿದ್ದೆಷ್ಟು? ಬಾಕ್ಸ್ ಆಫೀಸ್​ನಲ್ಲಿ ರಜಿನಿ ಚಿತ್ರ ಮಾಡಿತೇ ಕಮಾಲ್​? ಹೀಗಿದೆ ವರದಿ | Coolie Collection

ವಿಜಯವಾಣಿ (7)
Published on

Coolie Collection: ಆ.14ರಂದು ಜಾಗತಿಕವಾಗಿ ತೆರೆಕಂಡ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ಹಾಗೂ ತಮಿಳಿನ ಸೂಪರ್​ಸ್ಟಾರ್​ ರಜಿನಿಕಾಂತ್​​ ಅಭಿನಯದ ‘ಕೂಲಿ’, ಚಿತ್ರರಸಿಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದ್ದು, ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಓಟವನ್ನೇ ಕಂಡಿದೆ.

ರಿಲೀಸ್ ಆದ ಮೊದಲ ದಿನವೇ ಜಾಗತಿಕವಾಗಿ 151 ಕೋಟಿ ರೂ. ಲಾಭ ತೆಗೆದ ಈ ಚಿತ್ರವು, ಇದುವರೆಗೆ ಅತಿಹೆಚ್ಚು ಓಪನಿಂಗ್ ಪಡೆದ ತಮಿಳು ಚಿತ್ರ ಎಂಬ ಹೊಸ ದಾಖಲೆಗೆ ಸಾಕ್ಷಿಯಾಯಿತು. ಜೂ. ಎನ್​ಟಿಆರ್​ ಮತ್ತು ಹೃತಿಕ್ ರೋಷನ್ ಅಭಿನಯದ ‘ವಾರ್​ 2’ ಹಿಂದಿ ಚಿತ್ರದೊಂದಿಗೆ ಪೈಪೋಟಿಗಿಳಿದ ಕೂಲಿ, 10ನೇ ದಿನಕ್ಕೆ 244.94 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಭಾರತೀಯ ಬಾಕ್ಸ್​ ಆಫೀಸ್​ ಲೆಕ್ಕಾಚಾರ

'ಸ್ಯಾಕ್ನಿಲ್ಕ್' ವರದಿ ಪ್ರಕಾರ, ತೆರೆಕಂಡ ಎರಡನೇ ಶನಿವಾರ ಚಿತ್ರವು 9.44 ಕೋಟಿ ರೂ. ಗಳಿಸಿದೆ. ಶುಕ್ರವಾರ 5.85 ಕೋಟಿ ಮತ್ತು ಗುರುವಾರ 6.15 ಕೋಟಿ ರೂ. ಗಳಿಕೆಗೆ ಹೋಲಿಸಿದರೆ ಇದು ದೊಡ್ಡ ಮಟ್ಟದ ಜಿಗಿತವನ್ನೇ ತೋರಿಸಿದೆ. ಇನ್ನು ವಾರಾಂತ್ಯವಾದ ಹಿನ್ನೆಲೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಆಗಮಿಸಿರುವುದು ಗಳಿಕೆಯ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಚಿತ್ರಕ್ಕೆ ಹೊಸ ವೇಗವನ್ನು ನೀಡಿದೆ. ಈ ಮೂಲಕ ಕೂಲಿ, 250 ಕೋಟಿ ರೂ. ಕಲೆಕ್ಷನ್ ದಾಟುವುದು ಬಹುತೇಕ ಖಚಿತ ಎಂಬುದರಲ್ಲಿ ಅನುಮಾನವೇ ಇಲ್ಲ.

‘ಕೂಲಿ’ ತಾರಾ ಬಳಗ

ಲೋಕೇಶ್ ನಿರ್ದೇಶನದ ಈ ಚಿತ್ರದಲ್ಲಿ ರಜಿನಿಕಾಂತ್, ನಾಗಾರ್ಜುನ, ಕನ್ನಡದ ನಟ ಉಪೇಂದ್ರ, ಬಾಲಿವುಡ್​ ಹೀರೋ ಆಮಿರ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಶ್ರುತಿ ಹಾಸನ್, ಪೂಜಾ ಹೆಗ್ಡೆ (ವಿಶೇಷ ಹಾಡು) ಸೌಬಿನ್ ಶಾಹಿರ್, ರೇಬಾ ಮೋನಿಕಾ ಜಾನ್, ಸತ್ಯರಾಜ್, ರಚಿತಾ ರಾಮ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಆಗಸ್ಟ್ 14ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net