

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಧರ್ಮಸ್ಥಳ ಸರ್ವಧರ್ಮಿಯರ ಶ್ರದ್ಧಾಕೇಂದ್ರ. ದೂರದಾರನಾದ ಭೀಮನಿಂದಾಗಿ ಪವಿತ್ರ ಕ್ಷೇತ್ರದ ಬಗ್ಗೆ ಸಮೂಹ ಮಾಧ್ಯಮಗಳಲ್ಲಿ ಅಪಪ್ರಚಾರವಾಗುತ್ತಿದ್ದು, ದೇಶ-ವಿದೇಶಗಳಲ್ಲಿರುವ ಧರ್ಮಸ್ಥಳದ ಲಕ್ಷಾಂತರ ಭಕ್ತರು ಹಾಗೂ ಅಭಿಮಾನಿಗಳಿಗೆ ತೀವ್ರ ಆತಂಕವಾಗಿದೆ. ಭಯ, ಆತಂಕ ಮತ್ತು ಗೊಂದಲದ ವಾತಾವರಣ ಮೂಡಿದೆ. ದೇವರ ಅನುಗ್ರಹದಿಂದ ಈಗ ಸತ್ಯಹೊರಬಂದಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ರಾಜ್ಯ ಸರ್ಕಾರ ಜನತೆಯ ಕ್ಷಮೆಯಾಚಿಸಬೇಕು ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿಯಿಂದ 250 ಕಾರುಗಳಲ್ಲಿ ಭಕ್ತರೊಂದಿಗೆ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಶನಿವಾರ ಭೇಟಿಯಾಗಿ ಮಾತನಾಡಿದರು.
ದೂರುದಾರನ ಬುರುಡೆ ಪ್ರಕರಣದಿಂದ ಧರ್ಮಸ್ಥಳದ ಬಗ್ಗೆ ಅಪಪ್ರಚಾರವಾಗಿದೆ. ಇದರಲ್ಲಿ ವಿಚಾರವಂತರು ಹಾಗೂ ಎಡಪಂಥೀಯರ ಕೈವಾಡವಿದೆ. ಆರಂಭದಲ್ಲೆ ಆತನನ್ನು ಬಾಯಿ ಬಿಡಿಸುತ್ತಿದ್ದರೆ ಸತ್ಯ ವಿಚಾರ ತಿಳಿಯುತ್ತಿತ್ತು. ಸುಜಾತಾ ಭಟ್ ಪಾತ್ರವಂತೂ ಸಿನಿಮಾಕ್ಕಿಂತಲೂ ಅದ್ಭುತವಾಗಿದೆ. ಅವರು ಸಿನಿಮಾ ತಯಾರಿಸುತ್ತಿದ್ದರೆ ಪ್ರಚಾರವೂ ಸಿಗುತ್ತಿತ್ತು. ಅಪಾರ ಹಣವನ್ನೂ ಸಂಪಾದಿಸಬಹುದಿತ್ತು. ಏನೇ ಆಗಲಿ, ಸತ್ಯ ಹೊರಬಂದಿದೆ. ಆರೋಪಿಗಳಿಗೆ ಉಗ್ರ ಶಿಕ್ಷೆ ಆಗಲಿ, ಸತ್ಯ ಹೊರ ಬಂದಿದೆ. ಆರೋಪಿಗಳಿಗೆ ಉಗ್ರ ಶಿಕ್ಷೆ ಆಗಬೇಕು. ನಗರ ನಕ್ಸಲರು ಹಾಗೂ ಎಡಪಂಥೀಯರ ನಿಗ್ರಹ ಆಗಬೇಕು. ಹೆಗ್ಗಡೆ ಜತೆಗೆ ಲಕ್ಷಾಂತರ ಮಂದಿ ಭಕ್ತರ, ಅಭಿಮಾನಿಗಳ ಪೂರ್ಣ ಬೆಂಬಲ ಸದಾ ಇದೆ ಎಂದರು.
ಭಕ್ತರ ಶ್ರದ್ಧಾಭಕ್ತಿಯ ಅಭಿಮಾನಕ್ಕೆ ಸಂತಸಪಟ್ಟ ಡಾ.ಡಿ.ವೀರೇಂದ್ರ ಹೆಗ್ಗಡೆ ಮುಂದೆಯೂ ಸದಾ ಇದೇ ರೀತಿಯ ಪ್ರೀತಿವಿಶ್ವಾಸ, ಗೌರವ ಇರಲೆಂದು ಆಶಿಸಿದರು. ಡಾ.ಜೀವಂಧರ ಕುಮಾರ್, ಬಿಜೆಪಿ ನಾಯಕ ನವೀನ್ ಮೊದಲಾದವರಿದ್ದರು.