ಮೀಸಲು ಲಾಭಕ್ಕಾಗಿ ಮತಾಂತರ ಅಕ್ಷಮ್ಯ; ಸುಪ್ರೀಂಕೋರ್ಟ್​ನಿಂದ ಮಹತ್ವದ ತೀರ್ಪು

Supreme Court
Published on

ನವದೆಹಲಿ: ಇತರ ಧರ್ಮಗಳ ಮೇಲೆ ನೈಜವಾಗಿ ನಂಬಿಕೆ ಇಲ್ಲದಿದ್ದರೂ, ಕೇವಲ ಮೀಸಲಾತಿ ಪ್ರಯೋಜನ ಪಡೆಯುವ ಸಲುವಾಗಿ ಧಾರ್ವಿುಕ ಮತಾಂತರಕ್ಕೆ ಒಳಗಾಗುವುದು ಮೀಸಲಾತಿ ನೀತಿಯ ಸಾಮಾಜಿಕ ಉದ್ದೇಶವನ್ನು ವಿಫಲ ಗೊಳಿಸುತ್ತದೆ ಎಂದು ಸುಪ್ರೀಂಕೋರ್ಟ್ ಅಭಿ ಪ್ರಾಯಪಟ್ಟಿದೆ.

ಕ್ರೖೆಸ್ತ ಧರ್ಮದಲ್ಲಿ ಜನಿಸಿದ ಸೆಲ್ವರಾಣಿ ಎಂಬ ಮಹಿಳೆ ಪುದುಚೇರಿಯಲ್ಲಿ ಅಪ್ಪರ್ ಡಿವಿಷನ್ ಕ್ಲರ್ಕ್ ಹುದ್ದೆಗಾಗಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯುವುದಕ್ಕಾಗಿ ತನ್ನನ್ನು ಹಿಂದು ಎಂದು ಹೇಳಿಕೊಂಡಿದ್ದರು. ಆದರೆ, ಆಕೆಗೆ ಎಸ್​ಸಿ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂಬ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, ಇಲ್ಲಿ ಅರ್ಜಿದಾರ ಮಹಿಳೆ ಸೆಲ್ವರಾಣಿ ಕ್ರೖೆಸ್ತ ಧರ್ಮ ಪ್ರತಿಪಾದಿಸುತ್ತಾರೆ ಮತ್ತು ಚರ್ಚ್​ಗೆ

ಹಾಜರಾಗುವ ಮೂಲಕ ಧರ್ಮದ ಮೇಲಿನ ನಂಬಿಕೆ ಮುಂದುವರಿಸಿದ್ದಾರೆ ಎನ್ನುವುದು ನಮ್ಮ ಮುಂದಿರುವ ಸಾಕ್ಷ್ಯಗಳಿಂದ ಸ್ಪಷ್ಟವಾಗುತ್ತದೆ. ಹೀಗಿದ್ದರೂ, ಮಹಿಳೆ ತನ್ನನ್ನು ಹಿಂದು ಎಂದು ಹೇಳಿಕೊಳ್ಳುತ್ತಿದ್ದಾರೆ. ಉದ್ಯೋಗಕ್ಕಾಗಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯುವ ಉದ್ದೇಶ ಹೊಂದಿದ್ದಾರೆ. ಆದರೆ, ಇಂತಹ ದ್ವಂದ್ವದ ಹಕ್ಕು ಪ್ರತಿಪಾದನೆ ಸಮರ್ಥನೀಯವಲ್ಲ ಎಂದು ಹೇಳಿತು.

ತಾನು ಹಿಂದು ಧರ್ಮ ಪ್ರತಿಪಾದಿಸುತ್ತೇನೆ ಎಂದಿದ್ದ ಸೆಲ್ವರಾಣಿ, ತಾನು ವಳ್ಳುವನ್ ಜಾತಿಗೆ ಸೇರಿದ್ದು, ಇದು ಸಂವಿಧಾನ (ಪುದುಚೆರಿ) ಪರಿಶಿಷ್ಟ ಜಾತಿಗಳ ಆದೇಶ, 1964ರ ವ್ಯಾಪ್ತಿಯಲ್ಲಿ ಬರುತ್ತದೆ. ಆದ್ದರಿಂದ ಆದಿ ದ್ರಾವಿಡ ಕೋಟಾದ ಅಡಿಯಲ್ಲಿ ವಿನಾಯಿತಿ ಪಡೆಯಲು ಅರ್ಹ ಎಂದು ವಾದಿಸಿದ್ದರು.

ಪರಿಶಿಷ್ಟ ಸ್ಥಾನಮಾನ ಹಿಂದುಗಳಿಗಷ್ಟೇ ಅನ್ವಯ: ಪರಿಶಿಷ್ಟ ಜಾತಿಯ ಮೀಸಲಾತಿಗಾಗಿ ಧರ್ಮವನ್ನು ಮಾನದಂಡವಾಗಿ ಬಳಸುವ ಸಾಂವಿಧಾನಿಕ ಪ್ರಶ್ನೆಯ ಕುರಿತ ಪ್ರಕರಣ ಇನ್ನೂ ಸುಪ್ರೀಂಕೋರ್ಟ್​ನಲ್ಲಿ ಬಾಕಿ ಉಳಿದಿದೆ. ಕ್ರೖೆಸ್ತ ಧರ್ಮ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಮೀಸಲಾತಿ ನೀಡಬೇಕು ಎನ್ನುವುದು ಈ ಅರ್ಜಿಗಳ ವಾದ. ರಾಷ್ಟ್ರಪತಿಗಳು ಹೊರಡಿಸಿದ 1950ರ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ ಹಿಂದುಗಳಿಗೆ ಮಾತ್ರ ಎಸ್​ಸಿ ಸ್ಥಾನಮಾನ ಕಡ್ಡಾಯಗೊಳಿಸುತ್ತದೆ. ಮೀಸಲಾತಿಯ ಉದ್ದೇಶಗಳಿಗಾಗಿ, ಸಿಖ್ಖರು ಮತ್ತು ಬೌದ್ಧರನ್ನು ಹಿಂದುಗಳೆಂದು ಪರಿಗಣಿಸಲಾಗುತ್ತದೆ. 2007ರಲ್ಲಿ, ನ್ಯಾಯಮೂರ್ತಿ ರಂಗನಾಥ ಮಿಶ್ರಾ ಆಯೋಗವು ಧಾರ್ವಿುಕ ಮತ್ತು ಭಾಷಾ ಅಲ್ಪಸಂಖ್ಯಾತರ ವರದಿಯಲ್ಲಿ ದಲಿತ, ಕ್ರೖೆಸ್ತ ಮತ್ತು ಮುಸ್ಲಿಮರಿಗೆ ಪರಿಶಿಷ್ಟ ಜಾತಿಯ ಕೋಟಾ ಶಿಫಾರಸು ಮಾಡಿತ್ತು.

ಕೋರ್ಟ್ ಹೇಳಿದ್ದೇನು?: ಭಾರತ ಜಾತ್ಯತೀತ ದೇಶ. ಸಂವಿಧಾನದ 25ನೇ ಪರಿಚ್ಛೇದದಡಿ ಖಾತರಿಪಡಿಸಿದಂತೆ ಪ್ರತಿ ಪ್ರಜೆಗೂ ತಮ್ಮ ಆಯ್ಕೆಯ ಧರ್ಮ ಆಚರಿಸಲು ಹಕ್ಕಿದೆ. ಧರ್ಮದ ತತ್ವ-ಆಧ್ಯಾತ್ಮಿಕ ಚಿಂತನೆಗಳಿಂದ ನಿಜವಾದ ಸ್ಪೂರ್ತಿ ಪಡೆದ ವ್ಯಕ್ತಿ/ಮಹಿಳೆ ಬೇರೆ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ಅದಾಗ್ಯೂ, ಮತಾಂತರದ ಉದ್ದೇಶ ಬಹುಮಟ್ಟಿಗೆ ಮೀಸಲಾತಿಯ ಪ್ರಯೋಜನಗಳನ್ನು ಪಡೆಯುವುದಾಗಿದ್ದರೆ ಅದನ್ನು ಅನುಮತಿಸಲಾಗದು. ಏಕೆಂದರೆ ಈ ಜನರಿಗೆ ಮೀಸಲಾತಿಯ ಪ್ರಯೋಜನಗಳನ್ನು ವಿಸ್ತರಿಸುವುದು ಮೀಸಲಾತಿ ತತ್ವಗಳ ಮೂಲ ಉದ್ದೇಶವನ್ನೇ ಸೋಲಿಸುತ್ತದೆ.

ಏನಿದು ಪ್ರಕರಣ?

  • ಸರ್ಕಾರಿ ಹುದ್ದೆ ಬಯಸಿದ್ದ ಸೆಲ್ವರಾಣಿ
  • ಈಕೆ ಪುದುಚೇರಿಯ ಕ್ರೖೆಸ್ತ ಮಹಿಳೆ
  • ಎಸ್​ಸಿ ಪ್ರಮಾಣಪತ್ರಕ್ಕೆ ಕೋರಿಕೆ
  • ಕೋರಿಕೆ ತಿರಸ್ಕರಿಸಿದ ಸುಪ್ರೀಂ
  • ಚರ್ಚ್ ಭೇಟಿ ಉಲ್ಲೇಖಿಸಿದ ಸುಪ್ರೀಂ
  • ಹೀಗಿದ್ದರೂ ಹಿಂದು ಎನ್ನಲಾಗದು
  • ಮದ್ರಾಸ್ ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂಕೋರ್ಟ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net