ಬಗರ್​ಹುಕುಂ ಸಾಗುವಳಿದಾರರಿಗೆ ನಿರಾಳ; 13 ಲಕ್ಷ ರೈತರಿಗೆ ಅನುಕೂಲ

bagarhukum
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕರೊನಾ ಲಾಕ್​ಡೌನ್​ನಿಂದ ಕೊಂಚಮಟ್ಟಿಗೆ ಆತಂಕಕ್ಕೊಳ ಗಾಗಿದ್ದ ರೈತರಿಗೆ ಖುಷಿ ಕೊಡುವ ಸುದ್ದಿ ಇಲ್ಲಿದೆ. ಬಗರ್​ಹುಕಂನಲ್ಲಿ ತಿರಸ್ಕೃತಗೊಂಡ ಅರ್ಜಿದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರಿ ಭೂಮಿಯಲ್ಲಿ ನಡೆಯುತ್ತಿರುವ ಬಗರ್​ಹುಕುಂ ಸಾಗುವಳಿ ಯನ್ನು ಸಕ್ರಮ ಮಾಡಬೇಕೆಂಬ ಬೇಡಿಕೆ ತಿರಸ್ಕೃತಗೊಂಡ ಬಳಿಕ ರೈತರು ಹಲವು ವರ್ಷಗಳಿಂದ ಸರ್ಕಾರದ ಮುಂದೆ ಮನವಿ ಇಟ್ಟಿದ್ದರು. ಇದಕ್ಕೀಗ ಸರ್ಕಾರ ಸ್ಪಂದಿಸಿದೆ. ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ತಿರಸ್ಕೃತ ಅರ್ಜಿದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಕೆಗೆ ಅನುಮತಿ ನೀಡುವುದಕ್ಕೆ ಪ್ರಯತ್ನಗಳು ನಡೆದವಾದರೂ ಸಂಪೂರ್ಣವಾಗಲಿಲ್ಲ. ಆದ್ದರಿಂದ ಸರ್ಕಾರ ಸಹಾನುಭೂತಿಯಿಂದ ಈ ನಿಟ್ಟಿನಲ್ಲಿ ರೈತರ ಪರ ನಿರ್ಧಾರ ಕೈಗೊಂಡಿದೆ. 1996ರಿಂದಲೂ ಇರುವ ಸಮಸ್ಯೆ ಇದು. ಭೂ ಸುಧಾರಣಾ ಕಾಯ್ದೆಯಲ್ಲಿ ಅಕ್ರಮ ಭೂಮಿ ಸಕ್ರಮಕ್ಕೆ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಬೇರೆ ಬೇರೆ ಕಾರಣಗಳಿಂದ ತಿರಸ್ಕೃತವಾಗಿವೆ. 

ನಿಯಮ 50-53ರಡಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಹಿಂದಿನ ಸರ್ಕಾರ ನಿಯಮ 57ರಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲು ಸುಗ್ರೀವಾಜ್ಞೆ ರೂಪಿಸಲು ಮುಂದಾಗಿತ್ತ್ತು. ಒಂದು ಅವಧಿಗಷ್ಟೇ ಎಂದು ಹೇಳಲಾಗಿತ್ತು. ಆದರೆ ರಾಜಕೀಯ ಏಳುಬೀಳುಗಳ ಹಿನ್ನೆಲೆಯಲ್ಲಿ ಜಾರಿಯಾಗಲು ಸಾಧ್ಯವಾಗಲಿಲ್ಲ. ಆದ್ದರಿಂದ ಈಗ ಸರ್ಕಾರ ಆ ನಿಟ್ಟಿನಲ್ಲಿ ಪ್ರಯತ್ನಕ್ಕೆ ಮುಂದಾಗಿದೆ. ಹಿಂದಿನ ಕಂದಾಯ ಸಚಿವರುಗಳಾದ ಕಾಗೋಡು ತಿಮ್ಮಪ್ಪ ಹಾಗೂ ಆರ್.ವಿ. ದೇಶಪಾಂಡೆ ಸಾಕಷ್ಟು ಪ್ರಯತ್ನ ನಡೆಸಿದ್ದರೂ ಉದ್ದೇಶ ಈಡೇರಿರಲಿಲ್ಲ.

20 ಲಕ್ಷ ರೈತರ ನಿರೀಕ್ಷೆ: ಸರ್ಕಾರ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದರೆ 13 ಲಕ್ಷ ರೈತರಿಗೆ ಅನುಕೂಲವಾಗುತ್ತದೆ. ಹಿಂದೆ 40 ಲಕ್ಷ ಎಕರೆ ಭೂಮಿ ಸಕ್ರಮಕ್ಕೆ 25 ಲಕ್ಷ ರೈತರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 13 ಲಕ್ಷ ಅರ್ಜಿಗಳು ತಿರಸ್ಕೃತಗೊಂಡಿದ್ದವು. 5 ಲಕ್ಷ ಅರ್ಜಿಗಳು ವಿಚಾರಣೆಯ ಹಂತದಲ್ಲಿವೆ. ಸುಮಾರು 60 ಸಾವಿರ ಅರ್ಜಿಗಳು ಕಳೆದುಹೋಗಿದ್ದವು. ಕಾಗೋಡು ತಿಮ್ಮಪ್ಪ ಕಳೆದು ಹೋದ ಅರ್ಜಿದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಕೆಗೆ ಅವಕಾಶ

ಕಲ್ಪಿಸಿದ್ದರು. ಆದರೆ ತಿರಸ್ಕೃತ ಅರ್ಜಿಗಳಿಗೆ ಅವಕಾಶ ಸಿಕ್ಕಿರಲಿಲ್ಲ. ತಿರಸ್ಕೃತರ ಜತೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಸುಮಾರು 20 ಲಕ್ಷ ರೈತರು ಕಾಯುತ್ತಿದ್ದಾರೆ.

ಕರೊನಾ ಸಮಸ್ಯೆ ಮುಗಿದ ಕೂಡಲೇ 50-53ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಅರ್ಹ ರೈತರಿಗೆ ಯಾವುದೇ ತೊಂದರೆ ಯಾಗಬಾರದೆಂಬುದು ಸರ್ಕಾರದ ಉದ್ದೇಶ. | ಆರ್. ಅಶೋಕ್ ಕಂದಾಯ ಸಚಿವ

ಅರಣ್ಯ ಸಮಸ್ಯೆಗಿಲ್ಲ ಮುಕ್ತಿ

ಬಗರ್​ಹುಕುಂ ಸಾಗುವಳಿ ಸಮಿತಿಯ ಸಮಸ್ಯೆ ಒಂದೆಡೆ ಯಾದರೆ, ಅರಣ್ಯ ವಾಸಿಗಳ ಸಮಸ್ಯೆ ಇನ್ನೊಂದು ರೀತಿಯಲ್ಲಿದೆ. 75 ವರ್ಷಗಳ ದಾಖಲೆ ಎಂಬುದನ್ನು ತಪ್ಪಿಸಲು ಅರಣ್ಯಕಾಯ್ದೆಯ 3(1)ಗೆ ತಿದ್ದುಪಡಿ ತರಬೇಕಾಗಿದೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ಆ ಕೆಲಸ ಆಗಬೇಕಾಗಿದ್ದು, ಒತ್ತಡ ತರಲು ಸರ್ಕಾರ ತೀರ್ವನಿಸಿದೆ.

ರಾಜ್ಯದಲ್ಲಿ ತಿರಸ್ಕೃತರಾದ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮತ್ತೊಮ್ಮೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕೆಂಬ ಒತ್ತಾಯ ಇತ್ತು. ಸರ್ಕಾರದ ಮೇಲೂ ಸಾಕಷ್ಟು ಒತ್ತಡ ತರಲಾಗಿತ್ತು. ಈಗ ಸರ್ಕಾರ ಒಳ್ಳೆಯ ಕೆಲಸ ಮಾಡಲು ಮುಂದಾಗಿದೆ. ಅರಣ್ಯವಾಸಿಗಳ ಸಮಸ್ಯೆ ಬಗೆ ಹರಿಸಿದರೆ ಅನುಕೂಲವಾಗುತ್ತದೆ. | ಮಾರುತಿ ಮಾನ್ಪಡೆ, ರೈತ ಹೋರಾಟಗಾರ

ಯಾವಾಗ ಜಾರಿ?

ರಾಜ್ಯದಲ್ಲಿ ಕರೊನಾ ಕಡಿಮೆಯಾಗುತ್ತಿದ್ದಂತೆ 50, 53ನಲ್ಲಿ ಅರ್ಜಿ ಸಲ್ಲಿಸಲು ಅಗತ್ಯ ಸುಗ್ರೀವಾಜ್ಞೆ ಮೂಲಕ ತಂದು ಜಾರಿಗೊಳಿಸಲು ಸರ್ಕಾರ ತೀರ್ವನಿಸಿರುವುದಾಗಿ ಕಂದಾಯ ಇಲಾಖೆಯ ಮೂಲಗಳು ಹೇಳಿವೆ.ಕಾನೂನು ರೂಪಿಸಿ ಬಗರ್​ಹುಕುಂ ಸಾಗುವಳಿ ಸಮಿತಿಗಳಿಗೆ ಗಡುವು ವಿಧಿಸಿ ಅರ್ಜಿಗಳ ವಿಲೇವಾರಿ ಮಾಡಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.

ಭೂಕಬಳಿಕೆ ವ್ಯಾಪ್ತಿಯ ಅಪಾಯ

ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಬಗರ್​ಹುಕುಂ ಸಮಿತಿಗಳು ಸಕ್ರಮ ಮಾಡದಿದ್ದಲ್ಲಿ ಅದು ಕಬಳಿಕೆ ವ್ಯಾಪ್ತಿಗೆ ಬಂದು ರೈತರು ಜೈಲು ಸೇರುವ ಅಪಾಯ ಇದೆ. ಏಕೆಂದರೆ ಅರ್ಜಿಗಳು ತಿರಸ್ಕೃತವಾಗಿದ್ದರೂ ಸಹ ಬಹುತೇಕ ರೈತರು ಜಮೀನುಗಳಲ್ಲಿ ಸಾಗುವಳಿ ಮುಂದುವರಿಸಿದ್ದಾರೆ. ಬೆಂಗಳೂರಿನಲ್ಲಿದ್ದ ಭೂ ಕಬಳಿಕೆ ವಿಶೇಷ ನ್ಯಾಯಾಲಯಗಳನ್ನು ಈಗ ತಾಲೂಕಿಗೂ ವರ್ಗಾವಣೆ ಮಾಡಲಾಗುತ್ತಿದೆ. ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಮಟ್ಟಿಗೆ ಕಾನೂನು ಬಿಗಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net