ಪೀಠಿಕೆಗೆ ಪದ ಸೇರ್ಪಡೆ ತಕರಾರು; ಜಾತ್ಯತೀತ, ಸಮಾಜವಾದಿ ಸೇರಿಸುವ ವಿಚಾರ

Constitution Of India
Published on

ನವದೆಹಲಿ: ಸಂವಿಧಾನದ ಪೀಠಿಕೆಗೆ ಸಮಾಜವಾದಿ, ಜಾತ್ಯತೀತ ಮತ್ತು ಸಮಗ್ರತೆ ಎಂಬ ಪದಗಳನ್ನು ಸೇರಿಸುವ ಕುರಿತು 1976ರಲ್ಲಿ ತಂದಿದ್ದ ಸಂವಿಧಾನದ ತಿದ್ದುಪಡಿ ಈಗಾಗಲೇ ಹಲವು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿದೆ. ತುರ್ತಪರಿಸ್ಥಿತಿಯ ಅವಧಿಯಲ್ಲಿ ಸಂಸತ್ತು ಮಾಡಿದ್ದೆಲ್ಲವೂ ಅನೂರ್ಜಿತ ಎಂದು ಹೇಳಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ರಾಜ್ಯಸಭೆಯ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ, ವಕೀಲ ವಿಷ್ಣು ಶಂಕರ್ ಜೈನ್ ಮತ್ತು ಇತರರು ಸಮಾಜ ವಾದಿ ಮತ್ತು ಜಾತ್ಯತೀತ ಪದಗಳನ್ನು ಸೇರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ತೀರ್ಪನ್ನು ಕಾಯ್ದಿರಿಸಿದ ವೇಳೆ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ನ್ಯಾಯಪೀಠ ಈ ಅನಿಸಿಕೆ ಹೊರಹಾಕಿತು. ನ.25ರಂದು ಇದಕ್ಕೆ ಸಂಬಂಧಿಸಿ ತೀರ್ಪನ್ನು ಪ್ರಕಟಿಸುವುದಾಗಿ ಕೋರ್ಟ್ ಹೇಳಿದೆ.

ಈ ತಿದ್ದುಪಡಿಯು ಸಂವಿಧಾನದ ಮುನ್ನುಡಿಯಲ್ಲಿನ ಭಾರತದ ವಿವರಣೆಯನ್ನು ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯದಿಂದ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಬದಲಾಯಿಸಿತು.

ವಿಚಾರಣೆ ವೇಳೆ ಪ್ರಕರಣವನ್ನು ವಿಸõತ ಪೀಠಕ್ಕೆ ವರ್ಗಾಯಿಸಬೇಕೆಂಬ ಬೇಡಿಕೆಯನ್ನು ನ್ಯಾಯಪೀಠ ತಿರಸ್ಕರಿ ಸಿತು. ಭಾರತೀಯ ಅರ್ಥದಲ್ಲಿ ಸಮಾಜ ವಾದಿ ಎಂದರೆ ಕಲ್ಯಾಣ ರಾಜ್ಯದ ಕಲ್ಪನೆ ಎಂದು ಅರ್ಥೈಸಿಕೊಳ್ಳಬಹುದು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು.ಭಾರತದಲ್ಲಿ ಸಮಾಜವಾದವನ್ನು ನಾವು ಅರ್ಥಮಾಡಿಕೊಳ್ಳುವ ವಿಧಾನ ಇತರ ದೇಶಗಳಿಗಿಂತ ಬಹಳ ಭಿನ್ನವಾ ಗಿದೆ. ಸಮಾಜವಾದವು ಪ್ರಾಥಮಿಕವಾಗಿ ಕಲ್ಯಾಣ ರಾಜ್ಯ ಎಂದೇ ಆಗಿದೆ. ಸಮಾಜವಾದ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿರುವ ಖಾಸಗಿ ವಲಯಕ್ಕೆ ಎಂದಿಗೂ ತಡೆ ಹಾಕಲಿಲ್ಲ. ನಾವೆಲ್ಲರೂ ಅದರಿಂದ ಪ್ರಯೋಜನ ಪಡೆದಿದ್ದೇವೆ ಎಂದು ವಿವರಿಸಿದರು.

ಸಂವಿಧಾನದ 368ನೇ ವಿಧಿಯು ಸಂವಿಧಾನವನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಸಂಸತ್ತಿಗೆ ನೀಡಿದೆ ಮತ್ತು ಅದು ಸಂವಿಧಾನದ ಪೀಠಿಕೆಗೂ ವಿಸ್ತರಿಸಿದೆ ಎಂದ ಪೀಠ, ಸಂವಿಧಾನದ ಪೀಠಿಕೆಯು ಸಂವಿಧಾನದ ಭಾಗ ವಾಗಿದೆ. ಅದು ಪ್ರತ್ಯೇಕವಲ್ಲ. 1976ರಲ್ಲಿ ಲೋಕಸಭೆಯು ಸಂವಿಧಾನ ತಿದ್ದುಪಡಿ ಮಾಡಿದ್ದೇಕೆ ಎಂಬ ಬಗ್ಗೆ ವಿಚಾರಣೆ ಮಾಡಲು ಹೋಗುವುದಿಲ್ಲ ಎಂದು ತಿಳಿಸಿತು.

ನನ್ನ ಸ್ವಾಭಿಮಾನ: ಸಂವಿಧಾನದ ಕುರಿತು ಜಾಗೃತಿ ಮೂಡಿಸಲು ನ. 25ರಂದು ದೆಹಲಿಯ ಇಂಡಿಯಾ ಗೇಟ್ ಬಳಿ 125 ಶಿಕ್ಷಣ ಸಂಸ್ಥೆಗಳ 15ರಿಂದ 29ರ ವಯೋಮಾನದ 10 ಸಾವಿರಕ್ಕೂ ಅಧಿಕ ಯುವಕರು ಸಂವಿಧಾನದ ಪೀಠಿಕೆಯನ್ನು ಪಠಿಸುವ ಜತೆಗೆ 5.5 ಕಿ.ಮೀ. ಪಾದಯಾತ್ರೆಯಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಶುಕ್ರವಾರ ತಿಳಿಸಿದ್ದಾರೆ. ಭಾರತದ ಸಂವಿಧಾನವನ್ನು 1949ರ ನ. 26ರಂದು ಅಂಗೀಕರಿಸಲಾಗಿದ್ದು, ಈ ಸಲ ಅದರ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಇದನ್ನು ಆಯೋಜಿಸಲಾಗಿದೆ. ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದಿಂದ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ‘ನನ್ನ ಸಂವಿಧಾನ, ನನ್ನ ಸ್ವಾಭಿಮಾನ’ ಎಂಬ ಹೆಸರಿಡಲಾಗಿದೆ ಎಂದು ಅವರು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಈಗಾಗಲೇ ನೋಂದಣಿ ಆರಂಭವಾಗಿದ್ದು, ಆಸಕ್ತರು ‘ಮೈಭಾರತ್’ ವೆಬ್​ಸೈಟ್​ನಲ್ಲಿ ನೋಂದಾಯಿಸಿಕೊಳ್ಳಬಹುದು. ಕಾರ್ಯಕ್ರಮವು ಬೆಳಗ್ಗೆ 8.30ಕ್ಕೆ ಮೇಜರ್ ಧ್ಯಾನ್​ಚಂದ್ ಸ್ಟೇಡಿಯಂ ಬಳಿ ಆರಂಭಗೊಂಡು ವಿವಿಧ ಪ್ರದೇಶಗಳ ಮೂಲಕ ಸಾಗಿ 11ಕ್ಕೆ ಕ್ರೀಡಾಂಗಣದಲ್ಲಿ ಸಮಾಪ್ತಿಗೊಳ್ಳಲಿದೆ ಎಂದರು.

ಟ್ರಕ್ ಪ್ರವೇಶಕ್ಕೆ ಸುಪ್ರೀಂ ಅಸಮಾಧಾನ: ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿದ್ದರೂ, ಟ್ರಕ್​ಗಳನ್ನು ರಾಜಧಾನಿಯೊಳಗೆ ಪ್ರವೇಶಿಲು ಬಿಡುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ಎಲ್ಲ 113 ಪ್ರವೇಶ ಕೇಂದ್ರಗಳಲ್ಲಿ ಸಾಕಷ್ಟು ಚೆಕ್ ಪೋಸ್ಟ್​ಗಳು ಇರುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಆದೇಶಿಸಿದೆ.ಗಾಳಿ ಗುಣಮಟ್ಟ ತೀವ್ರ ಕಳಪೆ ಮಟ್ಟದಲ್ಲಿ ಇರುವುದರಿಂದ ಮಾಲಿನ್ಯವಿರೋಧಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ ಒಳಪಡುವ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವ ಮಧ್ಯೆ ಈ ಆದೇಶ ಪ್ರಕಟಿಸಿದೆ. ಅಗತ್ಯವಿರುವ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ತಂಡಗಳನ್ನು ರಚಿಸುವಂತೆ ನಿರ್ದೇಶನ ನೀಡಲಾಗಿದೆ.ಗಾಳಿ ಗುಣಮಟ್ಟ 450ಕ್ಕಿಂತ ಕಡಿಮೆಯಾದರೂ ಮಾಲಿನ್ಯ ವಿರೋಧಿ ಹಂತ 4ರ ಕ್ರಮಗಳನ್ನು ಮುಂದಿನ ಆದೇಶದವರೆಗೆ ಮುಂದುವರಿಸುತ್ತಿರ ಬೇಕು. ಕೋರ್ಟ್ ಆದೇಶ ಪಾಲನೆಯಾಗಿರುವ ಬಗ್ಗೆ ಸರ್ಕಾರಗಳು ಅಫಿಡವಿಟ್ ಸಲ್ಲಿಸಬೇಕು ಎಂದು ದೆಹಲಿ, ಹರ್ಯಾಣ, ಪಂಜಾಬ್, ರಾಜಸ್ಥಾನ , ಉತ್ತರಪ್ರದೇಶ ಸರ್ಕಾರಗಳಿಗೆ ತಿಳಿಸಿದೆ.

ಜ್ಞಾನವಾಪಿ ಸಮಿತಿಗೆ ನೋಟಿಸ್: ವಾರಾಣಸಿಯಲ್ಲಿನ ಜ್ಞಾನವಾಪಿ ಮಸೀದಿಯಲ್ಲಿ 2022ರ ಮೇ ತಿಂಗಳಲ್ಲಿ ‘ಶಿವಲಿಂಗ’ ಕಂಡುಬಂದಿದ್ದ ನಿರ್ಬಂಧಿತ ಪ್ರದೇಶದಲ್ಲಿ ಭಾರತದ ಪುರಾತತ್ವ ಸವೇಕ್ಷಣಾ ಇಲಾಖೆ(ಎಎಸ್​ಐ) ಮೂಲಕ ಸಮೀಕ್ಷೆ ನಡೆಸುವಂತೆ ಕೋರಿ ಹಿಂದುಗಳ ಕಡೆಯಿಂದ ಸಲ್ಲಿಸಲಾದ ಅರ್ಜಿ ಸಂಬಂಧ ಜ್ಞಾನವಾಪಿ ಮಸೀದಿ ಸಮಿತಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ನೇತೃತ್ವದ ಪೀಠವು ಅಂಜುಮಾನ್ ಇಂತೆಜಾಮಿಯಾ ಮಸೀದಿಯನ್ನು ನಿರ್ವಹಿಸುವ ಸಮಿತಿಗೆ ಈ ನೋಟಿಸ್ ಜಾರಿ ಮಾಡಿದೆ. ಅಲ್ಲದೆ 2 ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆಯೂ ನಿರ್ದೇಶನ ನೀಡಿದೆ. ವಾರಾಣಸಿ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದ ಜ್ಞಾನವಾಪಿ ಆವರಣದಲ್ಲಿ 2022ರ ಮೇ 16ರಂದು ನ್ಯಾಯಾಲಯದ ಆದೇಶದ ಮೇರೆಗೆ ನಡೆದ ಸಮೀಕ್ಷೆ ವೇಳೆ ವಝುಖಾನ ಜಾಗದಲ್ಲಿ ಲಿಂಗದಂಥ ರಚನೆ ಕಾಣಿಸಿದ್ದು, ಹಿಂದುಗಳು ಅದನ್ನು ಶಿವಲಿಂಗ ಎಂದಿದ್ದರೆ, ಮುಸ್ಲಿಮರು ಕಾರಂಜಿ ಎಂದು ಹೇಳಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net