ಸಚಿವರ ಹೆಗಲಿಗೆ ಕರೊನಾ ನಿಯಂತ್ರಣ ಹೊಣೆ; ಸಿಎಂ ಗಂಭೀರ ಚಿಂತನೆ; ಹೈಕಮಾಂಡ್ ಸೂಕ್ಷ್ಮ ಅವಲೋಕನ

Vidhana Soudha vvani
Published on

ಮೃತ್ಯುಂಜಯ ಕಪಗಲ್ ಬೆಂಗಳೂರು

ಹೆಚ್ಚುತ್ತಿರುವ ಕರೊನಾ ಸೋಂಕು ಕಟ್ಟಿ ಹಾಕುವುದರ ಜತೆಗೆ ಪ್ರತಿಪಕ್ಷಗಳ ಮುಗಿಬೀಳುವ ತಂತ್ರಕ್ಕೆ ಪ್ರತಿತಂತ್ರ ಹೂಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದು, ಪರಿಣಾಮಕಾರಿ ಅನುಷ್ಠಾನದ ಹೊಣೆಗಾರಿಕೆಯನ್ನು ಪ್ರತಿಯೊಬ್ಬ ಸಚಿವರಿಗೆ ಹಂಚಲು ಗಂಭೀರ ಚಿಂತನೆ ನಡೆಸಿದ್ದಾರೆ. ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿ, ರೋಗಿಗಳ ಚೇತರಿಕೆ ಪ್ರಮಾಣ ಹೆಚ್ಚಿಸುವುದರಿಂದ ಸದ್ಯದ ಉಲ್ಬಣಾವಸ್ಥೆಯು ಹತೋಟಿಗೆ ಬರಲಿದೆ. ಇದೇ ನೆಲೆಯಲ್ಲಿ ಹುಡುಕು, ಗುರುತಿಸು, ಪರೀಕ್ಷೆ ಹಾಗೂ ಚಿಕಿತ್ಸೆ (4 ’ಟಿ’ ಸೂತ್ರಗಳು) ಜತೆಗೆ ವ್ಯೂಹಾತ್ಮಕ (ಎಸ್)ನಡೆಯನ್ನು ಸೇರಿಸಿಕೊಳ್ಳುವುದು ಸೂಕ್ತವೆಂಬ ತಜ್ಞರು, ಹಿರಿಯ ಅಧಿಕಾರಿಗಳ ಅಭಿಪ್ರಾಯವನ್ನು ಸಿಎಂ ಪರಿಗಣಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕ್ಷೇತ್ರ ಮಟ್ಟದಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಕಟ್ಟುನಿಟ್ಟಿನ ಅನುಷ್ಠಾನ ಹಾಗೂ ಪಾಲನೆಗೆ ಹೆಚ್ಚು ಒತ್ತು ನೀಡಬೇಕಿದೆ. ಕ್ರಿಯಾಶೀಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆನ್ನಿಗೆ ಸಚಿವರು ನಿಂತು ಪ್ರೋತ್ಸಾಹಿಸುವುದರಿಂದ ಪರಿಣಾಮ ಬೀರಲಿದ್ದು, ಸಮುದಾಯದಲ್ಲಿ ಆತ್ಮವಿಶ್ವಾಸ ತುಂಬಲು ಸಾಧ್ಯವಾಗಲಿದೆ ಎನ್ನುವುದು ಸಿಎಂ ಚಿಂತನೆಯ ತಿರುಳಾಗಿದೆ. ಮೇಲ್ವಿಚಾರಣೆ ವಿಷಯದಲ್ಲಿ ಹಸ್ತಕ್ಷೇಪ, ಅಸಮತೋಲನದಂತಹ ಸೂಕ್ಷ್ಮ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಯೂ ಇದೆ. ಹೀಗಾಗಿ ಸೂಚನೆ ನೀಡುವ ಸಚಿವರು ಮತ್ತು ಜಾರಿಗೊಳಿಸಲಿರುವ ಅಧಿಕಾರಿಗಳ ಮಧ್ಯೆ ಏರುಪೇರಾಗದಂತೆ ಎಚ್ಚರಿಕೆ ವಹಿಸಬೇಕಿರುವುದನ್ನು ಸಿಎಂ ಗ್ರಹಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಲಭ್ಯ ತಂತ್ರಜ್ಞಾನಗಳ ಬಳಕೆ ಹಾಗೂ ಉತ್ಸಾಹಿ ಅಧಿಕಾರಿಗಳ ಪಡೆಗೆ ಸಿಎಂ ಮುಕ್ತ ಅವಕಾಶ ನೀಡಿದರು. ಇದರಿಂದಾಗಿ ಕರೊನಾ ನಿಯಂತ್ರಣ, ಮುನ್ನೆಚ್ಚರಿಕೆ ಕ್ರಮಗಳ ನಿರ್ವಹಣೆ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ಮೆಚ್ಚುಗೆ ಗಳಿಸಲು ಸಾಧ್ಯವಾಗಿದೆ. ಇದೇ ಉತ್ಸಾಹ, ನುರಿತರ ಪರಿಶ್ರಮ ಕಾಯ್ದುಕೊಂಡರೆ ಜನರ ಜೀವ, ಜೀವನ ರಕ್ಷಿಸಿ ಸಂಕಷ್ಟದಿಂದ ಪಾರಾಗಲು ಸಾಧ್ಯವಿದೆ ಎಂದು ಯಡಿಯೂರಪ್ಪ ಬಲವಾಗಿ ನಂಬಿದ್ದು, ಸಚಿವ ಸಂಪುಟದ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆಯಿಡಲು ಯೋಚಿಸಿದ್ದಾರೆ.

ಸಚಿವರ ನಿರ್ಲಿಪ್ತ ಧೋರಣೆ ತಲೆಬಿಸಿ: ಕರೊನಾ ನಿಯಂತ್ರಣ ವಿಷಯದಲ್ಲಿ ಪ್ರತಿಯೊಂದು ಹೆಜ್ಜೆಗೆ ದೆಹಲಿ ನಾಯಕರು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ಸಿಎಂ ಅವರಲ್ಲಿದೆ. ಜತೆಗೆ ರಾಜ್ಯದ ಪ್ರತಿಯೊಂದು ಬೆಳವಣಿಗೆಯನ್ನು ಹೈಕಮಾಂಡ್ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎನ್ನುವುದನ್ನು ಚೆನ್ನಾಗಿ ಬಲ್ಲರು. ಬೆರಳೆಣಿಕೆಯಷ್ಟು ಸಚಿ ವರು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದು, ಹಲವರು ತಾವಾಯಿತು ತಮ್ಮ ಇಲಾಖೆಯಾಯಿತು ಎಂಬ ನಿರ್ಲಿಪ್ತ ಧೋರಣೆ ತಳೆದಿರುವುದು ಸಿಎಂಗೆ ತಲೆಬಿಸಿ ತಂದಿದೆ. ಕರೊನಾ ಪ್ರಕರಣಗಳು ಹೆಚ್ಚು ಪತ್ತೆಯಾಗಿರುವ ಪ್ರದೇಶದಲ್ಲಿ ಬಿಗಿ ಕ್ರಮಗಳ ಅಗತ್ಯವಿರುವ ಕಾರಣ ಸಚಿವರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಯೊಂದು ವಿಷಯದಲ್ಲಿ ಅಧಿಕಾರಿಗಳಿಗೆ ಮಾರ್ಗದರ್ಶಿ, ಉತ್ತೇಜನ ನೀಡುವ ಕೆಲಸ ಮಾಡುವಂತೆ ತಿಳಿಹೇಳಲು ಸಿಎಂ ಬಯಸಿದ್ದಾರೆ.

ಮೌಲ್ಯಮಾಪನಕ್ಕೆ ನಂಟು: ಆಯಾ ಇಲಾಖೆ ಜತೆಗೆ ಕರೊನಾ ನಿಯಂತ್ರಣದ ಹೊಣೆಗಾರಿಕೆ ನಿರ್ವಹಿಸಿದ ರೀತಿಯೂ ಮೌಲ್ಯಮಾಪನಕ್ಕೆ ಪರಿಗಣಿಸುವ ಸಂದೇಶವನ್ನು ಸಿಎಂ ನೀಡಿ, ಜಡ ಮನಸ್ಥಿತಿಯ ಸಚಿವರಿಗೆ ಚುರುಕು ಮುಟ್ಟಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಜುಲೈನಲ್ಲಿ ಬಿಜೆಪಿ ಅಧಿಕಾರಾವದಿಯ ಮೊದಲ ವರ್ಷ ಪೂರ್ಣಗೊಳ್ಳಲಿದೆ. ಪ್ರಕೃತಿ ವಿಕೋಪ ಪರಿಹಾರ, ಉಪಚುನಾವಣೆ, ನಂತರ ವಕ್ಕರಿಸಿದ ಕರೊನಾದಿಂದಾಗಿ ಸಚಿವರ ಕಾರ್ಯವೈಖರಿ ಪರಾಮಶಿಸಿ, ಮೌಲ್ಯಮಾಪನ ಮಾಡುವ ಮಹೂರ್ತ ಇನ್ನೂ ನಿಗದಿಯಾಗಿಲ್ಲ. ಸಂಪುಟ ವಿಸ್ತರಣೆ ಬದಲು ಪುನಾರಚನೆಗೆ ಸಿಎಂ ಒಲವು ಹೊಂದಿದ್ದು, ಹೈಕಮಾಂಡ್ ಒಪ್ಪಿದರೆ ಎಲ್ಲ ಸಚಿವರ ಮೌಲ್ಯಮಾಪನಕ್ಕೂ ಸೂಚಿಸುವ ಸಾಧ್ಯತೆಗಳಿವೆ. ಕೆಲವರನ್ನು ಕೈಬಿಟ್ಟು ಪಕ್ಷದ ಸಂಘಟನೆಗೆ ಬಳಸಿಕೊಳ್ಳುವುದು, ಹಲವರನ್ನು ಸೇರಿಸಿಕೊಳ್ಳು ವುದಕ್ಕೂ ನೆರವಾಗಲಿದೆ ಎನ್ನುವುದು ಬಿಎಸ್​ವೈ ಲೆಕ್ಕಾಚಾರ.

ತಲೆದಂಡಕ್ಕೂ ಸೈ!: ಕರೊನಾ ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಅನುಷ್ಠಾನ ವಿಷಯದಲ್ಲಿ ನಿರ್ಲಕ್ಷ್ಯ ನಿಲುವು ತಳೆದರೆ ಸಚಿವರ ತಲೆದಂಡಕ್ಕೂ ಸೈ ಎಂದು ಸಿಎಂ ಮುಖೇನ ಹೇಳಿಸಲು ದೆಹಲಿಯ ಕೆಲವು ನಾಯಕರು ಬಯಸಿದ್ದಾರೆ. ಚುನಾವಣೆಗಳು ಬಂದಾಗ ಅಭ್ಯರ್ಥಿಗಳ ಆಯ್ಕೆ ಮಾಡುವಷ್ಟಕ್ಕೆ ವರಿಷ್ಠರು ಸೀಮಿತರಾಗಿಲ್ಲ. ಸರ್ಕಾರದ ವರ್ಚಸ್ಸು ಹಾಗೂ ಸಂಘಟನೆ ಬಲ ವೃದ್ಧಿಗೆ ಬೇಕಾದ ಸಲಹೆ-ಸೂಚನೆಗಳನ್ನು ಹೈಕಮಾಂಡ್ ಕಾಲ ಕಾಲಕ್ಕೆ ನೀಡುತ್ತಲೇ ಬಂದಿದೆ ಎಂದು ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net