ನಕಲಿ ಮದ್ಯದ ಹಾವಳಿ ನಿಯಂತ್ರಣ: ಸಚಿವ ತಿಮ್ಮಾಪುರ ಸೂಚನೆ | Strengthen surveillance

Excise meeting
Published on

ಬೆಂಗಳೂರು: ಜನರ ಆರೋಗ್ಯ, ಆರ್ಥಿಕ, ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಕ್ಲೋರೋ ಹೈಡ್ರೇಟ್ (ಸಿಎಚ್) ಪುಡಿ ಮಿಶ್ರಣ ತಯಾರಿಸಿದ ನಕಲಿ ಮದ್ಯದ ಹಾವಳಿಗೆ ಕಡಿವಾಣ ಹಾಕಲೇಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸೂಚಿಸಿದ್ದಾರೆ.

ವಿಧಾನಸೌಧದ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಬುಧವಾರ ಮಾತನಾಡಿದ ಅವರು, ಆಂಧ್ರಪ್ರದೇಶ ಹಾಗೂ ತೆಲಂಗಾಣ ಗಡಿಗಳಿಗೆ ಹೊಂದಿದ ರಾಯಚೂರು ಸೇರಿ ಇತರೆಡೆ ನಿಷೇಧಿತ ಸಿಎಚ್ ಪೌಡರ್‌ನಿಂದ ಸೇಂದಿ ತಯಾರಿಸುವವರು, ಮಾರುವವರ ಮೇಲೆ ಹದ್ದಿನ ಕಣ್ಣಿಡಬೇಕು ಎಂದು ತಿಳಿಹೇಳಿದರು.

ಸಿಹೆಚ್ ಪೌಡರ್ ಪೂರೈಕೆ, ಮಿಶ್ರಣಕ್ಕೆ ಅವಕಾಶ ಸಿಗದಂತೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ ಗುಪ್ತ ದಳ ವ್ಯವಸ್ಥೆ ಬಲಗೊಳಿಸುವ ಅಗತ್ಯವಿದೆ. ನೆರೆ ರಾಜ್ಯದ ಪೊಲೀಸ್, ಅಬಕಾರಿ ಅಧಿಕಾರಿಗಳ ಜತೆಗೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದು ಆರ್.ಬಿ.ತಿಮ್ಮಾಪುರ ಹೇಳಿದರು.

ದುರ್ಬಳಕೆ ನಿಯಂತ್ರಣ

ಮಿಲಿಟರಿ ಮದ್ಯ ದುರುಪಯೋಗ ಹಾಗೂ ಮಿಲಿಟರಿ ಹೆಸರಿನಲ್ಲಿ ನಕಲಿ ಮದ್ಯ ಮಾರಾಟವನ್ನು ನಿಯಂತ್ರಿಸುವುದಕ್ಕಾಗಿ ಬಿಎಲ್‌ಸಿ ಪ್ರಕರಣಗಳಿಗೆ ಏಕರೂಪ ದಂಡ ವ್ಯವಸ್ಥೆ ಜಾರಿಗೊಳಿಸಬೇಕು ಎಂದರು.

ಅಕ್ರಮ ಮದ್ಯ ಸಾಗಣೆಗೆ ಕಡಿವಾಣ, ನಕಲಿ ಮದ್ಯ ಪತ್ತೆ ಹಚ್ಚಲು ಇನ್ನಷ್ಟು ಸುಧಾರಣೆ ಕ್ರಮಗಳು ಅವಶ್ಯವಿದೆ. ವಾರ್ಷಿಕ ತೆರಿಗೆ ಗುರಿ ಸಂಗ್ರಹದ ವಿಷಯದಲ್ಲಿ ಇಲಾಖೆ ಅಧಿಕಾರಿಗಳು ಗಮನಹರಿಸಿ, ಪಾರದರ್ಶಕವಾಗಿ ಜವಾಬ್ದಾರಿ ನಿರ್ವಹಿಸಬೇಕು ಎಂದು ಆರ್.ಬಿ.ತಿಮ್ಮಾಪುರ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net