ಡೆಂಘೆ ನಿಯಂತ್ರಣ: ಗ್ರಾ.ಪಂ.ಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

Priyank Kharge (1)
Published on

ಬೆಂಗಳೂರು: ಮಳೆಗಾಲದ ಬೆನ್ನಲ್ಲೇ ಸೊಳ್ಳೆಗಳ ಹಾವಳಿಯಿಂದ ಡೆಂಘೆ ಜ್ವರ ರಾಜ್ಯದಲ್ಲಿ ವ್ಯಾಪಿಸಿದೆ. ಪರಿಸ್ಥಿತಿ ಮೇಲೆ ನಿಗಾವಹಿಸಿ ನಿಯಂತ್ರಣಕ್ಕೆ ಕ್ರಮವಹಿಸಲು ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಸರ್ಕಾರ ಜವಾಬ್ದಾರಿ ನಿಗದಿಪಡಿಸಿದೆ.

ಗ್ರಾ.ಪಂ.ಗಳು ಕೈಕೊಳ್ಳಬೇಕಾದ ಕ್ರಮಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಗೊತ್ತುಪಡಿಸಿ, ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಸೂಚನೆ ನೀಡಿದ್ದಾರೆ.

ಕುಡಿಯುವ ನೀರಿನ ಸರಬರಾಜು ಟ್ಯಾಂಕ್‌ಗಳುಳು, ತೆರೆದ ತೊಟ್ಟಿಗಳು ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ನೀರು ಶೇಖರಣೆ ಮಾಡುವ ತೊಟ್ಟಿಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಬೇಕು.

ಮನೆಗಳು, ಅಂಗಡಿ-ಮುಂಗಟ್ಟುಗಳು, ಹೊಟೇಲ್ ಗಳು, ವಾಣಿಜ್ಯ ಸಂಕೀರ್ಣಗಳು, ಸಾರ್ವಜನಿಕ ಸ್ಥಳಗಳು ಹಾಗೂ ಖಾಲಿ ಜಾಗಗಳಲ್ಲಿ ನೀರು ದೀರ್ಘಕಾಲ ನಿಲ್ಲದಂತೆ ಕ್ರಮವಹಿಸಿ, ಆವರಣಗಳು ಸ್ವಚ್ಛಗೊಳಿಸಬೇಕು. ನಿರುಪಯುಕ್ತ ಮತ್ತು ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಶೀಘ್ರವಾಗಿ ಹಾಗೂ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದ್ದಾರೆ.

ಜಂಟಿ ಕಾರ್ಯಾಚರಣೆ

ಗ್ರಾಮ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ, ಅಂಗನವಾಡಿ, ಶಾಲೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ಜತೆಗೂಡಿ ಜಂಟಿ ಕಾರ್ಯಾಚರಣೆ ಕೈಗೆತ್ತಿಕೊಳ್ಳಬೇಕು. ಅಂಗನವಾಡಿ, ಶಾಲಾ-ಕಾಲೇಜುಗಳು, ವಸತಿ ಶಾಲೆಗಳ ಚಾವಣಿ, ಆವರಣ, ಮತ್ತಿತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು.

ಸೊಳ್ಳೆಗಳು ಉತ್ಪತ್ತಿಯಾಗದಂತೆ ಕ್ರಮವಹಿಸುವುದು. ಚರಂಡಿಗಳ ಸ್ವಚ್ಛತೆ, ಕುಡಿಯುವ ನೀರಿನ ನಲ್ಲಿಗಳು, ಕೊಳವೆ ಬಾವಿಗಳು, ಕೊಳವೆ ಮಾರ್ಗ, ಒಳಚರಂಡಿ, ತ್ಯಾಜ್ಯ ವಿಲೇವಾರಿ ಸಮರ್ಪಕ ನಿರ್ವಹಣೆ, ನಿಗಾವಹಿಸಲು ಸೂಚಿಸಿದ್ದಾರೆ.

ಖಾಸಗಿಯವರಿಗೆ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸಬೇಕು. ಸೂಚನೆ ಪಾಲಿಸದವರಿಗೆ ನಿಯಮಾನುಸಾರ ದಂಡ ವಿಧಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಟ್ಟೆಚ್ಚರ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net