

ಸಾಗರ: ಯಕ್ಷಗಾನ ಎನ್ನುವುದು ಸ್ಥಿರಾಂಶ, ತಲೆಮಾರು ಎನ್ನುವುದು ಚರಾಂಶ ಈ ಎರಡೂ ಅಂಶಗಳಿಂದಲೇ ಯಕ್ಷಗಾನ ಚರಿತ್ರೆ ರೂಪಿತವಾಗಿದೆ ಎಂದು ಯಕ್ಷ ಸಂಶೋಧಕ ಡಾ. ಶಂಕರ ಶಾಸ್ತ್ರಿ ಹೇಳಿದರು.
ಶ್ರೀ ರಾಜರಾಜೇಶ್ವರಿ ಕೃಪಾಪೋಷಿತ ಯಕ್ಷಮೇಳದಿಂದ ಸಾಗರದಲ್ಲಿ ಏರ್ಪಡಿಸಿದ್ದ ವಿಜಯ ಸರಣಿ ತಾಳಮದ್ದಲೆ ಸಮಾರೋಪ ಸಮಾರಂಭದಲ್ಲಿ ರಮೇಶ್ ಹೆಗಡೆ ಗುಂಡೂಮನೆ ವಿರಚಿತ ಶ್ರೀ ಲಲಿತಾದೇವಿ ವಿಜಯ ಯಕ್ಷ ಕೃತಿ ಕುರಿತು ಮಾತನಾಡಿದರು.
ಯಕ್ಷಗಾನದಿಂದ ವಂಶವಾಹಿನಿಯನ್ನು ಪ್ರತ್ಯೇಕವಾಗಿ ಗಮನಿಸುತ್ತ ಹೋದರೆ ಯಕ್ಷಗಾನ ಒಂದು ಭಾಗವನ್ನು ಕಳೆದುಕೊಳ್ಳಲಿದೆ. ಯಕ್ಷಗಾನದ ಸೀಮೆಯನ್ನು ನದಿಗಳ ಮೂಲಕ ಹೇಳುವ ಕ್ರಮವಿದೆ. ಅದನ್ನು ಗಮನಿಸಿದಾಗ ಶರಾವತಿ ಕೊಳ್ಳ ಎನ್ನುವುದು ಯಕ್ಷಗಾನದ ವಿಸ್ತಾರಕ್ಕೆ ವಿಶೇಷ ಕೊಡುಗೆ ನೀಡಿದೆ ಎಂದರು.
ಸಂಸ್ಕೃತ ಉಪನ್ಯಾಸಕ ಗಜಾನನ ಭಟ್ ರೇವಣಕಟ್ಟಾ ಮಾತನಾಡಿ, ಯಕ್ಷಗಾನದಲ್ಲಿ ಅಲ್ಲಿಯ ಕವಿಯ ಹೃದಯ ಪಾತ್ರಧಾರಿಗಳಿಂದ ವ್ಯಕ್ತವಾದಾಗ ಮಾತ್ರ ನಿಜವಾದ ಕಲೆಯಾಗುತ್ತದೆ. ಅದನ್ನು ಹೊರತುಪಡಿಸಿ ವಿಮರ್ಶೆ ವಿತಂಡವಾದಕ್ಕೆ ಮುಂದುವರಿದರೆ ಅದು ಕಲೆಯಾಗಿ ಉಳಿಯುವುದಿಲ್ಲ ಎಂದು ತಿಳಿಸಿದರು.
ವಂಶವಾಹಿನಿಯ 10ನೇ ತಲೆಮಾರಿನ ಸಂಜನಾ ಹೆಗಡೆ ಕೃತಿ ಬಿಡುಗಡೆಗೊಳಿಸಿ 11ನೇ ತಲೆಮಾರಿನ ಚಂದನಾ ಗುಂಡೂಮನೆ ಅವರಿಗೆ ಹಸ್ತಾಂತರಿಸಿದರು. ಯುವ ಭಾಗವತ ಸುಜನ್ ಗಣೇಶ್ ಹೆಗಡೆ, ಸೂರ್ಯನಾರಾಯಣ ಹೆಗಡೆ, ಪೋಷಕ ಬಿ.ಎಸ್.ಕೃಷ್ಣ ಬಣ್ಣೂಮನೆ, ಗಣಪತಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ, ಹವ್ಯಕ ಒಕ್ಕೂಟದ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್, ಕಲಾವಿದರಾದ ಅರುಣ್ ಬೆಂಕಟವಳ್ಳಿ, ರವಿಶಂಕರ ಭಟ್, ಅಶೋಕಕುಮಾರ್, ಶರತ್ ಜಾನಕೈ ಇತರರಿದ್ದರು.