ಶಿಕ್ಷಣ ಕ್ಷೇತ್ರಕ್ಕೆ ಸಂಘ, ಸಂಸ್ಥೆಗಳ ಕೊಡುಗೆ ಅಪಾರ

5KDR1
ಕಡೂರಲ್ಲಿ ರೋಟರಿ ಕ್ಲಬ್‌ನಿಂದ ಏರ್ಪಡಿಸಿದ್ದ ಶಾಸಕರ ಅಭಿನಂದನೆ, ರಸ್ತೆ ಸುರಕ್ಷತಾ ಜಾಥಾ ಹಾಗೂ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು. ಕೆ.ಪಿ.ರಾಘವೇಂದ್ರ, ಸವಿತಾಸತ್ಯನಾರಾಯಣ್, ರಾಜಪ್ಪ, ಕೆಂಪಸಿದ್ದಯ್ಯ, ಎಂ.ಎಚ್.ಚಂದ್ರಪ್ಪ, ಡಾ. ಸಿ.ಜೆ. ಶಶಿಧರ್, ಚಂದ್ರಶೇಖರ್ ಶೃಂಗೇರಿ ಮತ್ತಿತರಿದ್ದರು.
Published on

ಕಡೂರು: ಸರ್ಕಾರದ ಸಹಭಾಗಿತ್ವದೊಂದಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಂಘ, ಸಂಸ್ಥೆಗಳು ಹಾಗೂ ಮಠ ಮಾನ್ಯಗಳ ಪಾತ್ರ ಪ್ರಮುಖ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಗಣಪತಿ ಪೆಂಡಾಲ್ ಆವರಣದಲ್ಲಿ ಶನಿವಾರ ರೋಟರಿ ಕ್ಲಬ್‌ನಿಂದ ಏರ್ಪಡಿಸಿದ್ದ ಶಾಸಕರ ಅಭಿನಂದನೆ, ರಸ್ತೆ ಸುರಕ್ಷತಾ ಜಾಥ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿಗೂ ಶೈಕ್ಷಣಿಕ ವ್ಯವಸ್ಥೆ ತನ್ನದೇ ಆದ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಶೇ.11ರಷ್ಟು ಸಾಕ್ಷರತೆ ಹೊಂದಿತ್ತು. ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯವಾಳಿದ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು ಹಾಗೂ ಅಂತರಾಷ್ಟ್ರೀಯ ಸಂಸ್ಥೆಯ ಹೆಗ್ಗಳಿಕೆ ಹೊಂದಿರುವ ರೋಟರಿ ಸಂಸ್ಥೆ ಸೇರಿದಂತೆ ಅನೇಕ ಸಂಘ, ಸಂಸ್ಥೆಗಳ ಕೊಡುಗೆಯಿಂದ ಸಾಕ್ಷರತೆ ಪ್ರಮಾಣ ಶೇ.90ರಷ್ಟು ಏರಿಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರಸ್ತುತ ಶಿಕ್ಷಣ ಪದ್ದತಿಯಿಂದ ವಿಶ್ವವಿದ್ಯಾಲಯಗಳು, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು ಹೆಚ್ಚಾಗಿ ಸ್ಥಾಪನೆಯಾಗಿರುವುದರಿಂದ ವಿದ್ಯಾರ್ಥಿಗಳ ಜ್ಞಾನರ್ಜನೆಗೆ ಮತ್ತುಷ್ಟು ಒತ್ತು ನೀಡಿದಂತಾಗಿದೆ. ಸಾಮಾಜಿಕ ಬದ್ದತೆಯೊಂದಿಗೆ ಕಾರ್ಯನಿರ್ವಹಿಸುವ ರೋಟರಿ ಸಂಸ್ಥೆ ಶಿಕ್ಷಣ ಮತ್ತು ಆರೋಗ್ಯದ ಕಡೆ ಸಾಕಷ್ಟು ಒತ್ತು ನೀಡುತ್ತಿರುವುದು ಶ್ಲಾಘನೀಯ. ರೋಟರಿ ಸಂಸ್ಥೆ ಕಡೂರಿನಲ್ಲಿ ಕೈಗೊಳ್ಳುವ ಸಮಾಜಮುಖಿ ಕಾರ್ಯಗಳಿಗೆ ನನ್ನ ಸಂಪೂರ್ಣ ಬೆಂಬಲ ನಿರಂತರವಾಗಿರುತ್ತದೆ ಎಂದರು.
ತಮ್ಮ ವಿದ್ಯಾಭ್ಯಾಸದ ಬದುಕಿಗೆ ತಿರುವು ನೀಡುವ ಪಿಯುಸಿ ಶಿಕ್ಷಣದಲ್ಲಿಯೇ ಗಟ್ಟಿ ನಿರ್ಧಾರ ತೆಗೆದುಕೊಂಡಾಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಹಲವು ಅಡೆತಡೆಗಳ ಸವಾಲುಗಳನ್ನು ಎದುರಿಸಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಾಗ ವಿದ್ಯಾರ್ಥಿ ಬದುಕು ಸಾರ್ಥಕತೆ ಪಡೆಯಲಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಯ ಜೀವನದ ಬದುಕನ್ನು ನೀವೆ ನಿರ್ಧರಿಸಿಕೊಳ್ಳಬೇಕು ಎಂದು ಶಾಸಕ ಕೆ.ಎಸ್.ಆನಂದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ರಾಘವೇಂದ್ರ ಮಾತನಾಡಿ, ಕಡೂರು ಪಟ್ಟಣದಲ್ಲಿನ ಹಿಂದು ರುದ್ರಭೂಮಿಯಲ್ಲಿ ಸುಮಾರು 60 ಲಕ್ಷ ವೆಚ್ಚದ ವಿದ್ಯುತ್ ಚಿತಾಗಾರ ನಿರ್ಮಿಸಲು ಯೋಜನೆ ರೂಪಿಸಿದ್ದು, ಚಿತಾಗಾರ ನಿರ್ಮಾಣ ಕಾರ್ಯಕ್ಕೆ ಕ್ಷೇತ್ರದ ಶಾಸಕರು ಸರ್ಕಾರದ ಮಟ್ಟದಲ್ಲಿ ಅಗತ್ಯ ಅನುದಾನ ಮಂಜೂರು ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net