

ಕಿಕ್ಕೇರಿ: ಹೇಮಗಿರಿ ಸಕ್ಕರೆ ಕಾರ್ಖಾನೆ ಇಲ್ಲಿನ ರೈತರ ಜೀವನಾಡಿಯಾಗಿದ್ದು, ಕಾರ್ಖಾನೆ ಸಮಗ್ರ ಅಭಿವೃದ್ಧಿಗೆ ರೈತರು ಸಹಕರಿಸಬೇಕು ಎಂದು ಹೇಮಗಿರಿ ಶುಗರ್ಸ್ ಕಾರ್ಖಾನೆ ಅಧ್ಯಕ್ಷ ವಿ.ಜೆ.ರವಿ ಮನವಿ ಮಾಡಿದರು.
ಸಮೀಪದ ಮಾಕವಳ್ಳಿ ಗ್ರಾಮದಲ್ಲಿನ ಹೇಮಗಿರಿ ಶುಗರ್ಸ್ ಹಾಗೂ ರಿನಿವಬಲ್ಸ್ ಸಂಸ್ಥೆ ವತಿಯಿಂದ ಗುರುವಾರ ಪ್ರಸಕ್ತ ಸಾಲಿನ ಕಬ್ಬು ನುರಿಯುವಿಕೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರಸಕ್ತ ಸಾಲಿನಿಂದ ಕೋರಮಂಡಲ್ ಸಕ್ಕರೆ ಕಾರ್ಖಾನೆಯನ್ನು ಹೇಮಗಿರಿ ಶುಗರ್ಸ್ ಕಂಪನಿಗೆ ಹಸ್ತಾಂತರಿಸಲಾಗಿದೆ. 4 ಕೋಟಿ ರೂ. ಮುಂಗಡ ಹಣ ನೀಡಿ, ಪ್ರತಿ ಟನ್ ಕಬ್ಬಿಗೆ 3,154ರೂ.ಗಳನ್ನು ರೈತರಿಗೆ ಸಕಾಲದಲ್ಲಿ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಟನ್ ಕಬ್ಬಿಗೆ 3,291ರೂ. ನಿಗದಿಯಾಗಿದ್ದು, ರೈತರಿಗೆ ಹಣ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಹೇಮಗಿರಿ ಶುಗರ್ಸ್ ಕಾರ್ಖಾನೆ ನಿತ್ಯ 4 ಸಾವಿರ ಟನ್ ಕಬ್ಬು ನುರಿಯುವ ಸಾಮರ್ಥ್ಯವಿದೆ. ವಾರ್ಷಿಕ 8ಲಕ್ಷ ಟನ್ ಕಬ್ಬು ನುರಿಯುವ ಗುರಿ ಇದೆ. ಆದರೆ ಕೇವಲ 11 ಸಾವಿರ ಎಕರೆಯಲ್ಲಿ 5 ಲಕ್ಷ ಮೆಟ್ರಿಕ್ ಟನ್‌ನಷ್ಟು ಕಬ್ಬು ಮಾತ್ರ ಲಭ್ಯವಿದೆ. 3 ಲಕ್ಷ ಟನ್ ಕಬ್ಬಿಗಾಗಿ ರೈತರು ಸುಧಾರಿತ ಪದ್ಧತಿಯಲ್ಲಿ ಹೆಚ್ಚು ಕಬ್ಬು ಬೆಳೆಯಲು ಮುಂದಾಗಬೇಕಿದೆ. ಮುಂಗಾರು ಹಂಗಾಮಿನಲ್ಲಿ ಉತ್ತಮ ಇಳುವರಿಗಾಗಿ ಬಿತ್ತನೆ ಸಸಿ ಮಡಿ ಅಭಿವೃದ್ಧಿಗಾಗಿ 300 ಎಕರೆಗೆ ಉಚಿತವಾಗಿ ವಿತರಿಸಲಾಗುವುದೆಂದರು.
ಕಾರ್ಖಾನೆ ಅಧಿಕಾರಿಗಳಾದ ಮೇಯನ್, ಅಶೋಕ್‌ಕುಮಾರ್, ಆರ್.ಇ.ಕುಮಾರ್, ಮೋಹನ್, ರವಿಚಂದ್ರನ್, ಜಿ.ಆರ್. ದತ್ತಾತ್ರೇಯ, ಚಾಮುಂಡೇಶ್ವರಿ ಶುಗರ್ಸ್ ಅಧ್ಯಕ್ಷ ನಾಚಿಯಪ್ಪನ್, ಮುಖ್ಯ ಹಣಕಾಸು ಅಧಿಕಾರಿ ಎನ್.ಶ್ರೀನಿವಾಸನ್, ಚೀಫ್ ಜನರಲ್ ಮಾನ್ಯೇಜರ್ ಪೂರ್ಣಸ್ವಾಮಿ, ಹೇಮಾವತಿ ಸಕ್ಕರೆ ಕಾರ್ಖಾನೆ ಕಬ್ಬು ವಿಭಾಗಾಧಿಕಾರಿ ದೇವೇಗೌಡ, ಕಾಯಿ ಮಂಜೇಗೌಡ, ಕೆ.ಜಿ. ಪುಟ್ಟರಾಜು, ಬೋರಾಪುರ ಮಂಜುನಾಥ್, ವಡಕಹಳ್ಳಿ ಮಂಜೇಗೌಡ, ಕುಮಾರ್, ಕಬ್ಬು ಬೆಳೆಗಾರ ಸಂಘ, ಲಾರಿ ಹಾಗೂ ಟ್ರಾಕ್ಟರ್ ಮಾಲೀಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಖಾನೆ ಸಿಬ್ಬಂದಿ ಹಾಜರಿದ್ದರು.