

ಬೆಂಗಳೂರು: ಕಮಿಷನ್ ಕೇಳುತ್ತಿದ್ದಾರೆ ಎಂದು ಭಾವಾವೇಶಕ್ಕೆ ಒಳಗಾಗಿ ಹೇಳಿಕೆ ನೀಡಿದೆ ಎನ್ನುವ ಮೂಲಕ ಗುತ್ತಿಗೆದಾರರು ಯೂಟರ್ನ್ ಹೊಡೆದಿದ್ದಾರೆ. ಹಾಗೆ ಹೇಳಿದ ತಕ್ಷಣ ಶಾಸಕರು ಸೇರಿ ಜನ ನಂಬುವುದಿಲ್ಲ. ಕಾಂಗ್ರೆಸ್ ಒತ್ತಡ ಅಥವಾ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮಣಿದು ಉಲ್ಟಾ ಹೇಳಿಕೆ ನೀಡಿದ ಸಾಧ್ಯತೆಗಳಿವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಶಂಕೆ ವ್ಯಕ್ತಪಡಿಸಿದರು.
ಐದು ವರ್ಷಗಳ ಕಾಲ ಅಧಿಕಾರದಿಂದ ದೂರವಿದ್ದ ಕಾಂಗ್ರೆಸ್‌ನವರು ಒಂದು ರೀತಿ ಹಸಿದ ಹುಲಿಗಳಾಗಿದ್ದಾರೆ. ಎಲ್ಲರೂ ಹಣ ಮಾಡಲು ಹೊರಟಿದ್ದಾರೆ. ನೂರಕ್ಕೆ ನೂರು ಭ್ರಷ್ಟ ಸರ್ಕಾರ ಎಂಬುದು ಜನರಿಗೆ ಮನವರಿಕೆಯಾಗಿದೆ. ಅಧಿಕಾರಕ್ಕೆ ಬಂದ ಅಲ್ಪಾವಧಿಯಲ್ಲಿ ಕಾಂಗ್ರೆಸ್ ಸರ್ಕಾರದ ಹೆಸರು ಖರಾಬಾಗಿದೆ ಎಂದು ಆಪ್ತರ ಬಳಿ ಸಿಎಂ ಸಿದ್ದರಾಮಯ್ಯ ಹೇಳಿಕೊಂಡಿರುವುದು ಗೊತ್ತಾಗಿದೆ ಎಂದರು.
ಗುತ್ತಿಗೆದಾರರು ಯೂಟರ್ನ್ ಆಗಿದ್ದಾರೆ ಎಂದ ಮಾತ್ರಕ್ಕೆ ಕ್ಲೀನ್‌ಚಿಟ್ ನೀಡಿದಂತಿಲ್ಲ. ಕಮಿಷನ್, ವರ್ಗಾವಣೆ ದಂಧೆ, ವೈಲ್ಯಗಳ ವಿರುದ್ಧ ಆ.15 ಬಳಿಕ ರಾಜ್ಯಾದ್ಯಂತ ಹೋರಾಟ ನಡೆಸಲಿದ್ದೇವೆ. ಈ ಸರ್ಕಾರದ ನಿಜಬಣ್ಣವನ್ನು ಬಯಲುಗೊಳಿಸಿ, ಜನರ ಮುಂದಿಡುತ್ತೇವೆ. ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುತ್ತೇವೆ ಎಂದು ಹೇಳಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಎನ್.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.