

ಬೆಂಗಳೂರು: ಮಹಾನಗರದಲ್ಲಿ ನಡೆಸಲಾದ ವಿವಿಧ ಕಾಮಗಾರಿಗಳ ಬಾಕಿ ಹಣ ಬಿಡುಗಡೆ ಮಾಡುವಂತೆ ಕೋರಿ ಬಬಿಎಂಪಿ ಗುತ್ತಿಗೆದಾರರ ಸಂಘದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಬಾಕಿ ಬಿಲ್ ಪಾವತಿ ಮಾಡುವವರೆಗೂ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳದಿರುವ ನಿಲುವು ಕೈಗೊಂಡ 24 ತಾಸಿನಲ್ಲೇ ಸಂಘವು ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಸಂಘದ ಪದಾಧಿಕಾರಿಗಳು ವಸ್ತುಸ್ಥಿತಿಯನ್ನು ಮನವರಿಕೆ ಮಾಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 28 ತಿಂಗಳ ಹಿಂದೆ ಪೂರ್ಣಗೊಳಿಸಿರುವ ಕಾಮಗಾರಿಗಳ ಬಿಲ್ ಪಾವತಿ ಬಾಕಿ ಇದೆ. ಚುನಾವಣೆ, ಹೊಸ ಸರ್ಕಾರ ರಚನೆ ಹೀಗೆ 8 ತಿಂಗಳಿನಿಂದ ಬಾಕಿ ಮೊತ್ತ ಬಿಡುಗಡೆ ಆಗಿರುವದಿಲ್ಲ. ಇದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂಬ ವಿಷಯವನ್ನು ಸಂಘದ ಅಧ್ಯಕ್ಷ ಆರ್. ಅಂಬಿಕಾಪತಿ ಅವರು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.
ಸಕಾರಾತ್ಮಕ ಸ್ಪಂದನೆ:
ಸರಕಾರದಿಂದ ಬಿಡುಗಡೆ ಆಗಿರುವ ಅನುದಾನ ಪಾಲಿಕೆಯ ಖಜಾನೆಯಲ್ಲಿ ಇದ್ದರೂ ಗುತ್ತಿಗೆದಾರರಿಗೆ ಬಾಕಿ ಬಿಡುಗಡೆ ಆಗುತ್ತಿಲ್ಲ ಎಂಬುದನ್ನು ಗಮನಕ್ಕೆ ತಂದಾಗ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿ, ಬಿಲ್ ಪಾವತಿ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಆಯುಕ್ತರೊಂದಿಗೆ ಚರ್ಚಿಸಿ ಬೇಗನೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಜಿ.ಎಂ. ರವೀಂದ್ರ, ನಂದಕುಮಾರ್, ಡಿ.ಎಂ.ನಾಗರಾಜ್, ಹನುಮಂತಯ್ಯ ಹಾಗೂ ಇತರರು ಹಾಜರಿದ್ದರು.