

ಶಿವಮೊಗ್ಗ: ರಾಜ್ಯ ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಶೇ.4 ಮೀಸಲಾತಿ ನೀಡುವುದನ್ನು ವಿರೋಧಿಸಿ ಹಾಗೂ ಈ ವಿಧೇಯಕಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಬಾರದು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮುಸ್ಲಿಂರಿಗೆ ಶೇ.4ರಷ್ಟು ಮೀಸಲಾತಿಯನ್ನು ಪರಿಚಯಿಸುವುದು ಸಂವಿಧಾನಕ್ಕೆ ವಿರೋಧವಾಗಿದೆ. ಸಂವಿಧಾನದ ಆರ್ಟಿಕಲ್ 15ರಲ್ಲಿ ರಾಜ್ಯವು ಧರ್ಮ ಮತ್ತು ಜಾತಿ ಆಧಾರದ ಮೇಲೆ ನಾಗರೀಕರ ತಾರತಮ್ಯ ಮಾಡುವುದನ್ನು ನಿಷೇಧಿಸಲಾಗಿದೆ. ಅಂಬೇಡ್ಕರ್ ಕೂಡ ಸಂವಿಧಾನ ರಚಿಸುವಾಗಲೇ ಧರ್ಮಾಧಾರಿತ ಮೀಸಲಾತಿ ವಿರೋಧಿಸಿದ್ದರು. ವಿವಿಧ ರಾಜ್ಯಗಳ ನ್ಯಾಯಾಲಯಗಳೂ ಇದೇ ನಿಲುವು ಪ್ರರ್ಶಿಸಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಹೀಗಿದ್ದರೂ ಕಾಂಗ್ರೆಸ್ ಸರ್ಕಾರ ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮೀಸಲಾತಿ ಕಲ್ಪಿಸಲು ಮುಂದಾಗಿದೆ. ಯಾವುದೇ ಕಾರಣಕ್ಕೂ ಈ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಬಾರದು. ಇದು ರಾಷ್ಟ್ರೀಯ ಸಮಗ್ರತೆ ಮತ್ತು ಏಕತೆಗೆ ಧಕ್ಕೆ ತರುತ್ತದೆ. ಈ ನಿಟ್ಟಿನಲ್ಲಿ ಮಸೂದೆಯನ್ನು ಅನುಮೋದಿಸದೇ ತಡೆಹಿಡಿಯಬೇಕೆಂದು ಒತ್ತಾಯಿಸಿದರು.
ವಿಎಚ್‌ಪಿ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ, ಬಜರಂಗ ದಳದ ಜಿಲ್ಲಾ ಸಂಯೋಜಕ ವಡಿವೇಲು ರಾಘವನ್, ಶಾಸಕ ಎಸ್.ಎನ್.ಚನ್ನಬಸಪ್ಪ, ಪ್ರಮುಖರಾದ ರಮೇಶ್ ಬಾಬು ಜಾಧವ್, ಆನಂದರಾವ್ ಜಾಧವ್, ಅಂಕುಶ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.