ದೆಹಲಿಯಲ್ಲಿ ಗುಡುಗು ಸಹಿತ ನಿರಂತರ ಮಳೆ; ವಿಮಾನಗಳ ಮಾರ್ಗ ಬದಲಾವಣೆ| flight

Flight
Published on

ನವದೆಹಲಿ; ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಇಂದು (ಸೆ.30) ಮಧ್ಯಾಹ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ ಐದು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇಂದು ದೆಹಲಿಯ ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ವಿಮಾನ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಬಹುದು ಎಂದು ವಿಮಾನಯಾನ ಸಂಸ್ಥೆಗಳು ಸಹ ಸಲಹೆ ನೀಡಿವೆ. ದೆಹಲಿಯ ನಿಲ್ದಾಣದಲ್ಲಿ ಇಳಿಯಬೇಕಿದ್ದ ಐದು ವಿಮಾನಗಳನ್ನು ಮಧ್ಯಾಹ್ನ 12.15 ರಿಂದ 12.30 ರ ನಡುವೆ ಜೈಪುರಕ್ಕೆ ತಿರುಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿರಂತರವಾಗಿ ಗುಡುಗು ಸಹಿತ ಸುರಿಯುತ್ತಿರುವ ಮಳೆಯು ದೆಹಲಿಯ ವಾಯು ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಹಿನ್ನೆಲೆ ಪರಿಸ್ಥಿತಿ ಸುಧಾರಿಸಿದ ತಕ್ಷಣ ನಿಮ್ಮ ಪ್ರಯಾಣ ಪುನರಾರಂಭಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ತಂಡಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ಇಂಡಿಗೋ ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದೆ. ದೆಹಲಿಯಲ್ಲಿ ಕೆಟ್ಟ ಹವಾಮಾನದಿಂದಾಗಿ, ಎಲ್ಲಾ ನಿರ್ಗಮನ/ಆಗಮನಗಳಲ್ಲಿ ಕೆಲ ಬದಲಾವಣೆಗಳಾಗಬಹುದು ಎಂದು ಬೆಳಗ್ಗೆ ಸ್ಪೈಸ್‌ಜೆಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು.

(ಏಜೆನ್ಸೀಸ್)

ರಾಷ್ಟ್ರ ರಾಜಧಾನಿಯಲ್ಲಿರುವ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (IGIA) ದೇಶದ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು, ಪ್ರತಿದಿನ ಸುಮಾರು 1,300 ವಿಮಾನಗಳ ಸಂಚಾರವನ್ನು ನಿರ್ವಹಿಸುತ್ತದೆ. ಐಎಂಡಿ ಪ್ರಕಾರ ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ದಿನವಿಡೀ ಹಗುರ ಮಳೆ ಅಥವಾ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂಬ ವರದಿಯಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಇಂದು ಬೆಳಗ್ಗೆ ಬಿದ್ದ ಭಾರೀ ಮಳೆ ಜನರಿಗೆ ಶಾಖದಿಂದ ಪರಿಹಾರ ತಂದಿತು ಆದರೆ ಅನೇಕ ಪ್ರದೇಶಗಳಲ್ಲಿ ನೀರು ನಿಲ್ಲುವ ಸಮಸ್ಯೆ ಉದ್ಭವಿಸಿತು. ಕೆಲ ಪ್ರದೇಶಗಳಲ್ಲಿ ಜನರು ದೀರ್ಘ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದರು. ಭಾರೀ ಮಳೆಯಿಂದಾಗಿ, ಅನೇಕ ಪ್ರಮುಖ ರಸ್ತೆಗಳಲ್ಲಿ ನೀರು ನಿಂತ ಕಾರಣ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ದೆಹಲಿ ಮತ್ತು ನೋಯ್ಡಾದ ಹಲವು ಭಾಗಗಳಲ್ಲಿ ಸಂಚಾರ ದಟ್ಟಣೆ ಇನ್ನೂ ಕೂಡ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net