

ತಿ.ನರಸೀಪುರ: ದಲಿತರ ಭೂಮಿ-ವಸತಿ ಹಕ್ಕಿಗಾಗಿ ಮತ್ತು ಇತರ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸೌಧದ ಮುಂಭಾಗ ಚುನಾವಣೆಗೊಂಡಿದ್ದ ದಸಂಸ ಮುಖಂಡರು ಹಾಗೂ ಕಾರ್ಯಕರ್ತರು ದಲಿತರನ್ನ ಭೂಮಿ, ವಸತಿ ಹಕ್ಕಿನಿಂದ ನಿರಂತರವಾಗಿ ವಂಚಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಧರಣಿ ಪ್ರಾರಂಭಿಸಿದರು.
ಹೋರಾಟದ ನೇತೃತ್ವ ವಹಿಸಿದ್ದ ಜಿಲ್ಲಾ ವಿಭಾಗದ ಸಂಚಾಲಕ ಬನ್ನಹಳ್ಳಿ ಸೋಮಣ್ಣ ಮಾತನಾಡಿ, ಭೂಮಿ ಉಳ್ಳವರಿಗೆ ಸಾಮಾಜಿಕ ಗಣತಿ ಹಾಗೂ ಆಳುವ ವರ್ಗವಾಗಿ ಸಮಾಜವನ್ನು ನಿಯಂತ್ರಿಸುವ ಅಧಿಕಾರವಿದೆ. ತಲೆತಲಾಂತರಗಳಿಂದಲೂ ದಲಿತರನ್ನು ಭೂಮಿ ಹಾಗೂ ನೈಸರ್ಗಿಕ ಸಂಪತ್ತಿನಿಂದ ವೈದಿಕಶಾಹಿಗಳು ವಂಚಿಸುತ್ತಲೇ ಬಂದಿದ್ದಾರೆ.
ಸ್ವಾತಂತ್ರ್ಯ ನಂತರದ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಅಧಿಕಾರಕ್ಕೆ ಬಂದಿರುವ ಸರ್ಕಾರಗಳು ಕೂಡ ದರಖಾಸ್ತು, ಗೋಮಾಳ ಹಾಗೂ ಪೋಡಿ ಜಮೀನುಗಳಲ್ಲಿ ದಲಿತರಿಗೆ ಭೂ ಒಡೆತನದ ಹಕ್ಕನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಅಲ್ಲಿವರೆಗೂ ದಲಿತ ಸಂಘಟನೆಗಳು ಚಳುವಳಿಯನ್ನ ರಾಜ್ಯಾದ್ಯಂತ ನಡೆಸಲಿವೆ ಎಂದು ತಿಳಿಸಿದರು.
ನಂತರ ಸಿಎಂ, ಕಂದಾಯ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಸಲ್ಲಿಸಲು ಉದ್ದೇಶಿಸಿದ್ದ ಮನವಿ ಪತ್ರಗಳನ್ನು ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ವಾಟಾಳು ನಾಗರಾಜು, ತಾಲೂಕು ಪ್ರಧಾನ ಸಂಚಾಲಕ ಬನ್ನಹಳ್ಳಿ ಬಸವರಾಜು, ಮುಖಂಡರಾದ ಸೋಮಪ್ಪ, ಗಿರೀಶ್, ಸೋಮೇಶ್, ರಂಗಸ್ವಾಮಿ, ಶ್ರುತಿ, ಬಸವಣ್ಣ, ಪುಟ್ಟರಂಗಯ್ಯ, ಜ್ಯೋತಿ, ಆನಂದ್, ಶಿವಕುಮಾರ್, ಮಾಲಾ, ಅಪ್ಪಾಜಿ, ವಾಟಾಳು ಕಾಂತರಾಜು, ಶೇಷಣ್ಣ, ನಾಗರಾಜ್ ಮತ್ತಿತರರು ಇದ್ದರು.